ಮೈಸೂರು: ಮೈಸೂರಿನ ಹೊರವಲಯದಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಸ್ಥಳದ ಮೇಲೆ ಇಲವಾಲ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಈ ವೇಳೆ ಯುವತಿಯರು ಸೇರಿದಂತೆ 50ಕ್ಕೂ ಹೆಚ್ಚು ಮಂದಿಯನ್ನ ಬಂಧಿಸಿ, 30ಕ್ಕೂ ಹೆಚ್ಚು ಕಾರುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೆ.ಆರ್.ಎಸ್.ಬ್ಯಾಕ್ ವಾಟರ್ ಬಳಿ ಇರುವ ಖಾಸಗಿ ಜಮೀನಿನಲ್ಲಿ ರೇವ್ ಪಾರ್ಟಿ ಆಯೋಜಿಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಇದನ್ನ ವ್ಯಕ್ತಿಯೊಬ್ಬ ಪ್ರಚಾರ ಮಾಡಿದ್ದರು, ಹಾಗಾಗಿ ಸುಮಾರು 25 ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ಹೆಸರು ನೊಂದಾಯಿಸಿ ಕೊಂಡಿದ್ದರು.ಈ ಪಾರ್ಟಿಗೆ ತಲಾ 2 ಸಾವಿರ ರೂ ಸಂಗ್ರಹಿಸಲಾಗಿತ್ತು ಎಂದು ಹೇಳಲಾಗಿದೆ.
ನಿನ್ನೆ ತಡರಾತ್ರಿ ಪಾರ್ಟಿ ಆರಂಭವಾಗಿತ್ತು. ಡಿಜೆ ಅಬ್ಬರದ ಸಂಗೀತವೂ ನಡೆದಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ.
ಯಾರೊ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಎಸ್ಪಿ ವಿಷ್ಣುವರ್ಧನ್ ಅವರ ನೇತೃತ್ವದಲ್ಲಿ ಅಡಿಷನಲ್ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ರಾವತರ್ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಬಂಧಿಸಲಾದ ಯುವಕ ಯುವತಿಯರನ್ನ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ಪಾರ್ಟಿ ವೇಳೆ ಆಯೋಜಿಸಿದ್ದ ಸಂಗೀತ ಉಪಕರಣಗಳನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದಾಳಿ ವೇಳೆ ಯಾವುದೇ ಮಾದಕ ವಸ್ತು, ಗಾಂಜಾ ದೊರತಿಲ್ಲವೆಂದು ಎಸ್ ಪಿ ವಿಷ್ಣುವರ್ಧನ್ ಅವರು ಸ್ಪಷ್ಟಪಡಿಸಿದ್ದಾರೆ.