ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಘಟನೆಗೆ ಅಶೋಕ್ ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮತಾಂಧ ಶಕ್ತಿಗಳು ಮತ್ತೊಮ್ಮೆ ಅಟ್ಟಹಾಸ ಮೆರೆದಿದ್ದು, ಸರ್ವ ಜನಾಂಗದ ಶಾಂತಿಯ ತೋಟವಾಗಿದ್ದ ಕರ್ನಾಟಕದಲ್ಲಿ ಜಿಹಾದಿ ಮುಳ್ಳುಗಳು ಶಾಂತಿ ಕದಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.

ಬುಧವಾರ ರಾತ್ರಿ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ಖಂಡಿಸಿರುವ ಅಶೋಕ್, ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಗೆ ಇದು ಮತ್ತೂಂದು ನಿದರ್ಶನವಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಕಳೆದ ವರ್ಷವೂ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಸಂದರ್ಭದಲ್ಲಿ ಇಂತದ್ದೇ ಘಟನೆ ನಡೆದಿತ್ತು,ಆದರೂ ಈ ವರ್ಷ ಪೊಲೀಸರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದರಿಂದಲೇ ಘಟನೆ ಮರುಕಳಿಸಿದೆ.

ಶಾಂತಿಯುತವಾಗಿ ಸಾಗುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆಗೆ ಅಡ್ಡಿಪಡಿಸುವ ದುರುದ್ದೇಶದಿಂದ ಕೆಲ ಪುಂಡರು ಪೂರ್ವನಿಯೋಜಿತವಾಗಿ ದಾಂಧಲೆ ಎಬ್ಬಿಸಿ ಸಾರ್ವಜನಿಕರು, ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ, ಚಪ್ಪಲಿ ಎಸೆದು, ಪೆಟ್ರೋಲ್ ಬಾಂಬ್ ಸ್ಫೋಟಿಸುವುದು, ತಲ್ವಾರ್ ಝಳಪಿಸುವಂತಹ ದುಸ್ಸಾಹಸಕ್ಕೆ ಮುಂದಾಗಿದ್ದಾರೆ ಅಂದರೆ ರಾಜ್ಯದಲ್ಲಿ ಇಂತಹ ಮತಾಂಧ ಪುಂಡರಿಗೆ, ಕಾನೂನಿನ ಭಯವೇ ಇಲ್ಲದಂತಾಗಿರುವುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆಗೆ ಬಂದವರ ಮೇಲೂ ಈ ಮತಾಂಧ ಪುಂಡರು  ದಬ್ಬಾಳಿಕೆ ನಡೆಸಿರುವುದು ನೋಡಿದರೆ ಈ ದುಷ್ಟರ ತಾಲಿಬಾನ್ ಮನಸ್ಥಿತಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಎಷ್ಟು ಪ್ರೋತ್ಸಾಹ ದೊರಕುತ್ತಿದೆ ಎಂಬುದನ್ನು ಊಹಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಪಕ್ಷ ಮತ್ತು ರಾಜ್ಯ ಸರ್ಕಾರದ ವೋಟ್ ಬ್ಯಾಂಕ್ ರಾಜಕಾರಣ, ಓಲೈಕೆ ರಾಜಕಾರಣ, ತುಷ್ಟೀಕರಣವೇ ಇಂತಹ ಘಟನೆಗಳು ಮರುಕಳಿಸುತ್ತಿರುವುದಕ್ಕೆ ನೇರ ಕಾರಣ ಎಂದು ಕಟುವಾಗಿ ಹೇಳಿದ್ದಾರೆ.

ಇಂತಹ ಮತಾಂಧ ಪುಂಡರ ಬಾಲ ಕತ್ತರಿಸದೆ ಹೀಗೆ ಬಿಟ್ಟರೆ ಇಂತಹವರು ನಾಳೆ ಉಗ್ರವಾದಿಗಳಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅಶೋಕ್ ಎಚ್ಚರಿಸಿದ್ದಾರೆ.

ನಾಗಮಂಗಲ ಗಲಭೆಗೆ ಕಾರಣರಾದ ಸಮಾಜ ಘಾತುಕ ಶಕ್ತಿಗಳನ್ನ ಕೊಡಲೇ ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಿ  ಕರ್ನಾಟಕದಲ್ಲಿ ಜಿಹಾದಿ ಮಾನಸಿಕತೆಗೆ ಜಾಗವಿಲ್ಲ ಎಂಬ ದಿಟ್ಟ ಸಂದೇಶ ರವಾನಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಒತ್ತಾಯಿಸಿದ್ದಾರೆ.