ನಮ್ಮದು ಬಾಂಬೆ ಟೀಂ ಅಲ್ಲ; ಬಿಎಸ್ ವೈ ಟೀಂ -ಸಚಿವ ಬಿ.ಸಿ.ಪಾಟೀಲ್

ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ನಮ್ಮದು ಈಗ ಬಾಂಬೆ ಟೀಂ ಅಲ್ಲ ಬಿಎಸ್ ವೈ ಟೀಂ, ಬಿಜೆಪಿ ಟೀಂ, ನಮ್ಮಲ್ಲಿ ಯಾವುದೇ ಬಿರುಕಿಲ್ಲ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ಗುಂಡ್ಲುಪೇಟೆಯಲ್ಲಿ ಮಾಧ್ಯಮಗಳೊಂದಿಗೆ ಸಚಿವರು ಶನಿವಾರ ಮಾತನಾಡಿದರು.
ಬಾಂಬೆ ಟೀಮ್ ನಲ್ಲಿ ಬಿರುಕು ಬಿಟ್ಟಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಬಿ.ಸಿ. ಪಾಟೀಲ್, ಸಂಪುಟ ಪುನಾರಚನೆಯ ಅಸಮಾಧಾನ ಕುರಿತು ಮಾತನಾಡಿ, ನಮ್ಮ ಐದು ಬೆರಳುಗಳೇ ಸಮವಿಲ್ಲ, ಕೆಲವರಿಗೆ ಅತೃಪ್ತಿ ಆಗಿರುವುದು ಸಹಜ. ಶಾಸಕರು ಕೆಲ ಇಲಾಖೆಯನ್ನು ನಿರ್ವಹಿಸುವ ಇಚ್ಛೆ ಇರುವುದರಿಂದ ಅಸಮಾಧಾನ ಇರಲಿದ್ದು ಬಳಿಕ ಶಮನ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಾನು ಇಚ್ಛೆ ಪಟ್ಟು ಕೃಷಿ ಖಾತೆಯನ್ನು ತೆಗೆದುಕೊಂಡಿದ್ದು, ರೈತರ ಬಾಳು ಹಸನಾದಾಗ ಮಾತ್ರ ನನಗೆ ತೃಪ್ತಿ. ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಗಬೇಕು, ಉತ್ತಮ ಸೌಕರ್ಯ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದ್ದೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರೈತರ ಮನೆ ಬಾಗಿಲಿಗೆ ಸರ್ಕಾರವನ್ನು ತೆಗೆದುಕೊಂಡು ಹೋಗಿ ಅವರ ಸಮಸ್ಯೆ ಅರಿತು, ಅವರಿಗೆ ಆತ್ಮವಿಶ್ವಾಸ ತುಂಬಲು ರೈತರೊಂದಿಗೆ ಒಂದು ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ಮೂರು ಕೃಷಿ ಕಾನೂನು ವಿರುದ್ಧ ದೆಹಲಿಯಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ 10 ಬಾರಿ ಸಭೆ ನಡೆಸಿದೆ. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ರೈತರೊಂದಿಗೆ ಹೊಂದಾಣಿಕೆ ಏರ್ಪಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ನಡೆದ ಗಣಿ ದುರಂತದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ.
ಚಾಮರಾಜನಗರದಲ್ಲಿ ಗಣಿಗಾರಿಕೆಯಿಂದ ಎಲ್ಲೆಲ್ಲಿ ರೈತರಿಗೆ ತೊಂದರೆ ಉಂಟಾಗುತ್ತಿದೆ ಎಂಬ ಬಗ್ಗೆ ತಿಳಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಬಗ್ಗೆ ಗಣಿ ಸಚಿವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ತಿಳಿಸಿದರು.
ಪೂರ್ಣ ಕುಂಭ ಸ್ವಾಗತ: ಗುಂಡ್ಲುಪೇಟೆ ತಾಲೂಕಿನ ಮಾಡ್ರಳ್ಳಿ ಗ್ರಾಮಕ್ಕೆ ಆಗಮಿಸಿದ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರಿಗೆ ಅಂಗನವಾಡಿ ನೌಕರರು ಪೂರ್ಣ ಕುಂಭ ಸ್ವಾಗತ ಕೋರಿದರು.
ಡೊಳ್ಳುಕುಣಿತ, ವೀರಗಾಸೆ ಕಲಾವಿದರ ತಂಡ ಮತ್ತು ಬಿಜೆಪಿ ಕಾರ್ಯಕರ್ತರು ಸಚಿವ ಬಿ.ಸಿ.ಪಾಟೀಲ್ ಅವರನ್ನು ಮೆರವಣಿಗೆ ಮೂಲಕ ಮಾರಮ್ಮನ ದೇವಸ್ಥಾನ ಕರೆದುಕೊಂಡು ಹೋಗಿ ದೇವಿಗೆ ಪೂಜೆ ಸಲ್ಲಿಸಲಾಯಿತು.
ಸಚಿವರು ಗ್ರಾಮಕ್ಕೆ ಆಗಮಿಸಿರುವುದನ್ನು ನೋಡಲು ಜನರು ಕಿಕ್ಕಿರಿದು ತುಂಬಿದ್ದರು.
ಇಲ್ಲಿ ಕೃಷಿ ಸಂಬಂಧಿತ ಸಮಸ್ಯೆ ಹೇಳಿಕೊಳ್ಳಲು ಬಂದಿದ್ದವರು ಸಚಿವರನ್ನು ಭೇಟಿ ಮಾಡಲಾಗದೆ ನಿರಾಸೆಯಿಂದ ದೂರ ನಿಂತರು.