ನನ್ನ ಮೇಲಿನ ಆರೋಪ‌ ನಿರಾಧಾರ:ಯಡಿಯೂರಪ್ಪ ಸ್ಪಷ್ಟ ನುಡಿ

ಬೆಂಗಳೂರು: ನನ್ನ ಮೇಲೆ ಮಹಿಳೆಯೊಬ್ಬರು ದೂರು ಕೊಟ್ಟಿದ್ದು, ಆ ಅರೋಪ ನಿರಾಧಾರವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಹೇಳಿದ್ದಾರೆ.

ತಮ್ಮ ಮೇಲಿನ ಆರೋಪ ಸಂಬಂಧ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ಒಬ್ಬ ಹೆಣ್ಣು ಮಗಳು ಅನ್ಯಾಯವಾಗಿದೆ ಎಂದು ನನ್ನ ಬಳಿ ಬಂದಿದ್ದರು,ತಾಯಿ- ಮಗಳು ಅನೇಕ ಬಾರಿ ಬಂದು ಹೋಗುತ್ತಿದ್ದರು. ಆದರೆ ನಾನು ಅವರನ್ನು ಮಾತಾಡಿಸೋ ಪ್ರಯತ್ನ ಮಾಡಿಲ್ಲ ಎಂದು ಹೇಳಿದರು.

ಹೀಗೆ ಒಂದಿನ ಕಣ್ಣೀರು ಹಾಕುತ್ತಿರುವುದನ್ನು ನೋಡಿ ಒಳಗೆ ಕರೆದುಕೊಂಡು ಹೋಗಿ ಏನು ಸಮಸ್ಯೆ ಎಂದು ಕೇಳಿದೆ. ಈ ವೇಳೆ ಅವರು ನಮಗೆ ತುಂಬಾ ಅನ್ಯಾಯವಾಗಿದೆ ಎಂದು ಹೇಳಿದರು. ಆಗ ನಾನು ಪೊಲೀಸ್‌ ಕಮಿಷನರ್‌ಗೆ ಕರೆ ಮಾಡಿ ಇವರಿಗೆ ಅನ್ಯಾಯವಾಗಿದೆಯಂತೆ ನ್ಯಾಯ ಒದಗಿಸಿಕೊಡಿ ಎಂದು ಹೇಳಿದೆ. ಅಲ್ಲದೆ ತಾಯಿ- ಮಗಳಿಬ್ಬರನ್ನೂ ಕಳುಹಿಸಿದೆ ಎಂದು ತಿಳಿಸಿದರು.

ಇದಾದ ಮೇಲೆ ಆಕೆ ನನ್ನ ಮೇಲೆಯೇ ಏನೇನೋ ಮಾತಾಡೋಕೆ ಶುರು ಮಾಡಿದಳು. ಆಗ ಮಹಿಳೆ ಯಾಕೋ ಆರೋಗ್ಯವಂತೆಯಾಗಿಲ್ಲ ಅನ್ನೋದು ಗೊತ್ತಾಯಿತು,ಹಾಗಾಗಿ ಹೆಚ್ಚು ಮಾತಾಡಿದರೆ ಉಪಯೋಗ ಇಲ್ಲವೆಂದು ನಾನು ಅವರನ್ನು ಪೊಲೀಸ್‌ ಕಮಿಷನರ್‌ ಬಳಿ ಕಳುಹಿಸಿಕೊಟ್ಟೆ.
ಎಂದು ಹೇಳಿದರು.

ಅವರು ಕೂಡಾ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈಗ ಇದು ಬೇರೆ ರೀತಿ ಏನೋ ಮಾಡಿ ನನ್ನ ಮೇಲೆ ಎಫ್‌ಐಆರ್‌ ಆಗಿದೆ. ಕಾನೂನು ಪ್ರಕಾರ ಏನು ಎದುರಿಸಬೇಕೋ ಎದುರಿಸ್ತೀನಿ ಎಂದು ತಿಳಿಸಿದರು.

ಒಬ್ಬರಿಗೆ ಉಪಕಾರ ಮಾಡಲು ಹೋಗಿ ಹೀಗಾಗಿದೆ,ಆದರೆ ಮಹಿಳೆಗೆ ಕಷ್ಟ ಇದೆ ಅಂತಾ ಹೇಳಿ ಸ್ವಲ್ಪ ಹಣನೂ ಕೊಟ್ಟು ಕಳುಹಿಸಿದ್ದೀನಿ, ಇಷ್ಟೆಲ್ಲಾ ಮಾಡಿದರೂ ಹೀಗೆ ಈ ರೀತಿಯ ಬೆಳವಣಿಗೆ ನಡೆದಿದೆ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದರು.