ನನ್ನ ರಾಜಕೀಯ ಜೀವನ ಇಲ್ಲಿ ಆರಂಭವಾಗಿದ್ದು, ಇಲ್ಲಿಯೇ ಅಂತ್ಯವಾಗಲೂಬಹುದು? -ಸಚಿವ ಆನಂದ್ ಸಿಂಗ್

ಹೊಸಪೇಟೆ: ನನ್ನ ರಾಜಕೀಯ ಜೀವನ ಇಲ್ಲಿ ಆರಂಭವಾಗಿದ್ದು, ಇಲ್ಲಿಯೇ ಅಂತ್ಯವಾಗಲೂಬಹುದು?ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.

ಹೊಸಪೇಟೆಯಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಚಿವ ಆನಂದ್ ಸಿಂಗ್ ಮಾತನಾಡಿದರು.

ನಾನು ಇದೇ ವೇಣುಗೋಪಾಲ ಸನ್ನಿಧಿ ಬಳಿ ರಾಜಕೀಯ ಜೀವನ ಆರಂಭಿಸಿದ್ದು, ಇಲ್ಲಿಯೇ ಅಂತ್ಯವಾಗಲೂ ಬಹುದು, ಮುಂದೆ ಏನಾಗಬಹುದು ಎಂದು, ರಾಜಕೀಯ ಜೀವನ ಪುನರಾರಂಭವಾಗಲೂಬಹುದು ಎಂದು ಹೇಳಿದರು.

ನನ್ನ ರಾಜಕೀಯ ಜೀವನ ಇದೇ ಹೊಸಪೇಟೆಯ ವೇಣುಗೋಪಾಲ ಸ್ವಾಮಿ ದೇವಸ್ಥಾನದಿಂದ ಆರಂಭವಾಯಿತು. ನಮ್ಮ ನಾಯಕರ ಮೇಲೆ ನನಗೆ ನಂಬಿಕೆಯಿದೆ. ಆದರೆ ನಾಯಕರಿಗೆ ನನ್ನ ಮೇಲೆ ನಂಬಿಕೆಯಿದೆ ಎಂದು ಅನಿಸುತ್ತಿಲ್ಲ, ಬಿ ಎಸ್ ಯಡಿಯೂರಪ್ಪನವರು ಸಿಎಂ ಆಗಿದ್ದರೆ ನಾನು ಏನೂ ಕೇಳುತ್ತಿರಲಿಲ್ಲ ಎಂದರು.

ಪಕ್ಷದಲ್ಲಿ ನನಗೆ ಕೆಲವೊಂದು ನೋವುಗಳಿವೆ, ಅದನ್ನು ನಾನು ನಾಲ್ಕು ಗೋಡೆಗಳ ಮಧ್ಯೆ ಚರ್ಚಿಸಿ ಬಗೆಹರಿಸಿಕೊಳ್ಳಲು ಬಯಸುತ್ತೇನೆ. ಇವತ್ತು ನಾನು ಯಾವುದೇ ರಾಜಕೀಯ ಹೇಳಿಕೆಗಳನ್ನು ನೀಡುವುದಿಲ್ಲ, ಹೇಳಿಕೆ ನೀಡದಂತೆ ನಮ್ಮ ನಾಯಕರು ಸಹ ಸೂಚನೆ ನೀಡಿದ್ದಾರೆ ಎಂದರು.

ನಾನು ರಾಜ್ಯದ ಉನ್ನತ ರಾಜಕಾರಣಿಯೇನಲ್ಲ, ವಿಜಯನಗರ ಸಾಮ್ರಾಜ್ಯದೊಳಗೆ ಹೊಸಪೇಟೆಯಲ್ಲಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿ ಬಂದಿರುವ ರಾಜಕಾರಣಿಯಷ್ಟೆ, ಯಾರನ್ನೂ ಬ್ಲ್ಯಾಕ್ ಮೇಲ್ ಮಾಡುವ ಕೆಲಸ ಮಾಡುವ ತಂತ್ರ ನಾನು ಮಾಡುವುದಿಲ್ಲ. ಪಕ್ಷಕ್ಕೆ ಮತ್ತು ನಾಯಕರಿಗೆ ಮುಜುಗರ ತರುವಂತಹ ಕೆಲಸವನ್ನು ಮಾಡುವುದಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದರು.

ಮುಖ್ಯಮಂತ್ರಿ ಬೊಮ್ಮಾಯಿಯವರನ್ನು ನಾಳೆ ಅಥವಾ ನಾಡಿದ್ದು ಭೇಟಿ ಮಾಡುತ್ತೇನೆ ಎಂದು ಅವರು ತಿಳಿಸಿದರು.