-ಜಿ.ಆರ್.ಸತ್ಯಲಿಂಗರಾಜು
ನವರಸಗಳಿಗೆ ರಸಸ್ಥಿತಿಗಳು ಎಂದೂ ಕರೆಯುತ್ತಾರೆ.
ಮನುಷ್ಯನ ಒಳಗಡೆ ಸುಪ್ತ ಅನುಭಗಳು ಇದ್ದೇ ಇವೆ. ಭೌತಿಕ ಸನ್ನಿವೇಶಗಳಿಂದ ಅವು ಪ್ರಚೋದಿತಗೊಂಡು, ಇಂದ್ರಿಯ ಚುರುಕಾಗಿ, ಅದು ಮುಖ ಮತ್ತು ದೇಹದ ಅಂಗಗಳ ಮೂಲಕ ಪ್ರಕಟವಾಗುತ್ತವೆ. ಇದನ್ನೇ ರಸಸ್ಥಿತಿಗಳು ಎನ್ನಲಾಗುತ್ತೆ.
(ದೇಹದೊಳಗಿನ ಯಾವ ಗ್ರಂಥಿ ಪರಿಸ್ಥಿತಿಗೆ ಅನುಗುಣವಾಗಿ ಸ್ರವಿಕೆ ಮಾಡುತ್ತೆ, ಮಿದುಳು ಹೇಗೆ ಕಾರ್ಯ ಮಾಡಿ, ನಿಶ್ಚಿತ ಕ್ರಿಯೆಗೆ ಪ್ರಚೋದನೆಯಾಗುತ್ತೆ, ಭಾವನೆ ಹೇಗೆ ಪ್ರದರ್ಶಿತವಾಗುತ್ತೆ ಎಂಬುದಕ್ಕೆ ವೈಜ್ಞಾನಿಕ ವೈದ್ಯಕೀಯ ಮತ್ತು ಮನಃಶಾಸ್ತ್ರದ ವಿಚಾರ ಇಲ್ಲಿ ಪ್ರಸ್ತಾಪ ಮಾಡುತ್ತಿಲ್ಲ. ಅಗತ್ಯವಿದ್ದವರು ನನ್ನ ‘ಮನಃ ಶಾಸ್ತ್ರ’ ವೈದ್ಯಕೀಯ – ತಂತ್ರಜ್ಞಾನ’ ‘ಮಾನವ ಶಾಸ್ತ್ರ’ ಕೃತಿಗಳನ್ನ ಪರಾಮರ್ಶೆ ಮಾಡಿಕೊಳ್ಳಬಹುದು).
ರಸಸ್ಥಿತಿಗಳನ್ನ ಒಂಬತ್ತು ವಿಧದಲ್ಲಿ ಗುರುತಿಸಲಾಗಿದ್ದು, ಇವನ್ನೇ ನವರಸಗಳು ಎನ್ನುವುದು.
ಅವುಗಳೆಂದರೆ-ಶೃಂಗಾರ ರಸ : ಇದಕ್ಕೆ ‘ಕಾಂತರಸ’ ಎಂಬ ಹೆಸರು ಕೂಡ ಇದೆ. ‘ರತಿ’ ಎಂಬ ಸ್ಥಾಯೀ ಕ್ರಿಯೆಯ ಒಂದು ಟಿಸಿಲು ಇದಾಗಿದ್ದು, ವಸ್ತುವನ್ನ ಹೀರುವಂತೆ ಕಣ್ಣುಗಳನ್ನ ಅರಳಿಸಿ, ಅನುರಾಗ ಹೆಚ್ಚುವಂತೆ ಹುಬ್ಬನ್ನ ಚಲಿಸಿ ಕಡೆಗಣ್ಣಿನಿಂದ ‘ಶೃಂಗಾರ ರಸ’ ವನ್ನ ಸೂಚಿಸಲಾಗುತ್ತೆ.
ಗಂಡು-ಹೆಣ್ಣು ಪ್ರೇಮಸಲ್ಲಾಪದಲ್ಲಿ ತೊಡಗಿದ್ದಾಗ ಉಂಟಾಗುವ ಭಾವನೆಯೇ ‘ಶೃಂಗಾರ ರಸ’.
ಇಷ್ಟವಾದ ಜನರೊಡನೆ ಸಹವಾಸ, ಉದ್ಯಾನದಲ್ಲಿ ವಿಹಾರ, ಪ್ರಶಂಸೆ, ಕಾಮೋದ್ದೀಪಕ ಚಿತ್ರ, ಜಲಕ್ರೀಡೆ ಇತ್ಯಾದಿಗಳಿಗೆ ಪ್ರತೀಕ ಆಗಿರುವುದಕ್ಕೆ ‘ಸಂಸರ್ಗ/ಸಂಭೋಗ ಶೃಂಗಾರ’ ಎನ್ನಲಾಗಿದೆ. . ಉತ್ಸಾಹ, ನಿದ್ರೆ, ಉನ್ಮಾದ, ಅಸೂಯೆ, ಶಂಕೆ, ಮೋಹ ಇತ್ಯಾದಿಯನ್ನ ಅಭಿನಯಿಸುವುದು ‘ವಿಪ್ರಲಂಬ ಶೃಂಗಾರ’ ಸಿನಿಮಾದಲ್ಲಿ ಪ್ರೇಮಿಗಳಿಬ್ಬರು ಆಲಂಗಿಸಿ ರಸವತ್ತಾಗಿ ಮಾತಾಡುವುದು, ಮೊದಲ ರಾತ್ರಿಯ ದೃಶ್ಯ ಇವು ಶೃಂಗಾರ ರಸದ ಉದಾಹರಣೆಯಾದರೆ, ಅತ್ಯಾಚಾರದ ದೃಶ್ಯ ವಿಪ್ರಲಂಬ ಶೃಂಗಾರ. . ಹಾಸ್ಯರಸ: ಕಣ್ಣಿನ ಕರಿಗುಡ್ಡೆಯನ್ನ ಸ್ವಲ್ಪ ಒಳಕ್ಕೆ ವಿಚಿತ್ರವಾಗಿ ಸುತ್ತಿಸಿ, ಮೆಲ್ಲಗೆ ಅಥವಾ ಸುಮಾರಾಗಿ ಹಾಗೂ ಜಾಗ್ರತೆಯಿಂದ ಕಣ್ಷು ಮಿಟುಕಿಸುವುದು ಹಾಸ್ಯರಸದ ಅಭಿವ್ಯಕ್ತಿ ಯಾಗಿದೆ.
ವಿಚಿತ್ರ ವೇಷಭೂಷಣ, ನಿರ್ಲಜ್ಜತೆ, ಕುಹಕ, ವಕ್ರತೆ, ಅಕಾರಣ ಭಯ, ಅಕಾರಣ ಪ್ರಲಾಪ, ಕುಚೇಷ್ಟೆ, ತುಟಿ, ಮೂಗು, ಕೆನ್ನೆ ಸ್ಪಂದಿಸುವುದು, ಕಣ್ಣಿನಲ್ಲಿ ವಕ್ರತೆ, ಕೈಕಾಲು ಬಡಿಯುವುದು, ಪಕ್ಕೆ ಹಿಡಿದು ನಗುವುದು, ಮಾತಾಡುವ ಶೈಲಿ, ಇವೆಲ್ಲದರ ಮುಖೇನ ಹಾಸ್ಯರಸ ಪ್ರಕಟಿಸಬಹುದು. .
ನಗುವಿನ ಪ್ರತೀಕವಾಗಿರುವ ಹಾಸ್ಯ ರಸ, ತಾನು ನಕ್ಕಂತೆ ನಟಿಸುತ್ತಾ, ಪ್ರೇಕ್ಷಕರನ್ನು ನಗುವಂತೆ ಮಾಡುವುದು ಇದರ ಗುಣ.