ಬೆಂಗಳೂರು: ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಛೇಡಿಸಿದ್ದರು.
ಮುಂಗಾರು ಬಜೆಟ್ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸಿಎಂ ವಿಧಾನ ಪರಿಷತ್ತಿನಲ್ಲಿ ಬಜೆಟ್ ಮಂಡನೆ ಮೇಲಿನ ಚರ್ಚೆಗೆ ಉತ್ತರಿಸುವ ವೇಳೆ ಬಿಜೆಪಿ ಸದಸ್ಯರ ಪ್ರತಿಭಟನೆಗೆ ತಿರುಗೇಟು ನೀಡಿದರು.
ಗಾಂಧಿ ಕೊಂದವರ ವಂಶದವರು ಅವರ ಪ್ರತಿಮೆ ಮುಂದೆ ಧರಣಿ ಮಾಡುತ್ತಿರುವುದು ವಿಪರ್ಯಾಸವೇ ಸರಿ, ಅವರು ನ್ಯಾಯಯುತವಾಗಿ ನಾಥೂರಾಮ್ ಗೋಡ್ಸೆ ಪ್ರತಿಮೆ ಮುಂದೆ ಕುಳಿತುಕೊಳ್ಳಬೇಕು ಎಂದು ಟೀಕಿಸಿದರು.
ಬಿಜೆಪಿಯವರು ಬರೀ ಸುಳ್ಳು ಹೇಳುತ್ತಾರೆ ಘರ್ಷಣೆ ಉಂಟು ಮಾಡುವವರು, ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ. ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲು ಇವರಿಗೆ ನೈತಿಕತೆ ಇದೆಯೇ ಎಂದು ಸಿದ್ದು ಪ್ರಶ್ನಿಸಿದರು.
ನನ್ನ ರಾಜಕೀಯ ಜೀವನದಲ್ಲಿ ಇದುವರೆಗೆ 14 ಬಾರಿ ಬಜೆಟ್ ಮಂಡಿಸಿದ್ದೇನೆ. ನನ್ನ ಬಜೆಟ್ ಮಂಡನೆ ಇತಿಹಾಸದಲ್ಲಿ ವಿಪಕ್ಷದವರು ಇಲ್ಲದೆಯೇ ಸದನದಲ್ಲಿ ಉತ್ತರ ನೀಡುತ್ತಿದ್ದೇನೆ ಎಂದು ಹೇಳಿದರು.
ಒಂದು ಸರ್ಕಾರದಲ್ಲಿ ಸಮರ್ಥ ವಿಪಕ್ಷದವರು ಇರಬೇಕು, ಸರ್ಕಾರದ ಕೆಲಸಗಳನ್ನು ಪ್ರಶ್ನಿಸುವವರು, ಗಮನಿಸುವವರು, ಟೀಕಿಸುವ ಸಮರ್ಥ ವಿರೋಧ ಪಕ್ಷದವರು ಇರಬೇಕಾಗುತ್ತದೆ.
ಆದರೆ ಎರಡೂ ಸದನಗಳ ಕಲಾಪವನ್ನು ವಿಪಕ್ಷದವರು ಬಹಿಷ್ಕಾರ ಮಾಡಿದ್ದು ಖಂಡನೀಯ, ಇದು ಬಿಜೆಪಿ ಮತ್ತು ಜೆಡಿಎಸ್ ನ ಜನವಿರೋಧಿ,ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಸಿಎಂ ಗರಂ ಆಗಿ ನುಡಿದರು.
ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿ ಸದನದ ಬಾವಿಗಿಳಿಯುವುದು, ಪ್ರತಿಭಟನೆ ಮಾಡುವುದು ವಿರೋಧ ಪಕ್ಷದವರ ಹಕ್ಕು, ಹಾಗೆಂದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿಸುವುದು, ಅನುಚಿತ ವರ್ತನೆ ಸರಿಯಲ್ಲ.
ಅಗೌರವ, ಅನಾಗರಿಕ ರೀತಿಯಲ್ಲಿ ವರ್ತಿಸಿದ್ದಕ್ಕೆ ಅಮಾನತು ಮಾಡಲಾಗಿದೆ. ಅಲ್ಲಿ ಮಾರ್ಷಲ್ ಗಳು ಬರದಿದ್ದರೆ ಪರಿಸ್ಥಿತಿ ಬೇರೆಯದೇ ಆಗುತ್ತಿತ್ತೇನೋ ಎಂದು ಸಿಎಂ ಹೇಳಿದರು
ಬಜೆಟ್ ಮಂಡನೆ ಮೇಲೆ ಸದನದಲ್ಲಿ ಚರ್ಚೆ ನಡೆಯಬೇಕಿತ್ತು, ಆದರೆ ಹಾಗಾಗಲಿಲ್ಲ. ಜೆಡಿಎಸ್ ನವರು ಏಕೆ ಸದನ ಕಲಾಪ ಬಹಿಷ್ಕರಿಸಿದರು ಅವರು ಹಾಜರಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.
ಬಜೆಟ್ ಮೇಲೆ ಕೇವಲ ಇಬ್ಬರೇ ವಿಪಕ್ಷ ನಾಯಕರು ಚರ್ಚಿಸಿದ್ದಾರೆ, ಇದಕ್ಕೆ ಏನು ಹೇಳಬೇಕು, ವಿರೋಧ ಪಕ್ಷದವರಿಗೆ ಜನರ ಬಗ್ಗೆ ಕಾಳಜಿಯಿಲ್ಲ ಎಂದು ಸ್ಪಷ್ಟವಾಗಿ ತೋರಿಸುತ್ತದೆ ಅಲ್ಲವೆ ಎಂದರು ಸಿದ್ದರಾಮಯ್ಯ.