ನಗರ ಸಭೆ ತೆರಿಗೆ ಸಕಾಲದಲ್ಲಿ ಸಂಗ್ರಹಿಸಲು ಹಾಸನ ದಿಸಿ ಸೂಚನೆ

ಹಾಸನ: ಸ್ವಯಂ ಘೋಷಿತ ಆಸ್ತಿ ತೆರಿಗೆ ಹಾಗೂ ಇತರ ತೆರಿಗೆಗಳನ್ನು ನಗರಸಭೆ ಕಂದಾಯ ಅಧಿಕಾರಿಗಳು ಸಕಾಲದಲ್ಲಿ ಸಂಗ್ರಹಿಸಬೇಕು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಗರಸಭೆ ಯೋಜನೆಗಳ ಅನುಷ್ಠಾನದ ಬಗ್ಗೆ ಪರಿಶೀಲನಾ ಸಭೆ ನಡೆಸಿದ ಅವರು ಪಾರದರ್ಶಕ ಕಾಯ್ದೆಯನ್ವಯ ಎಲ್ಲಾ ಕಾರ್ಯಗಳನ್ನು ನಡೆಸುವಂತೆ ಸೂಚನೆ ನೀಡಿದರು.
ಕಸ ಸಂಗ್ರಹ, ವರ್ಗಿಕರಣ ಮತ್ತು ವಿಲೇವಾರಿ ಸಮರ್ಪಕವಾಗಿ ನಡೆಯಬೇಕು. ನಗರ ವ್ಯಾಪ್ತಿಯಲ್ಲಿ ಕಸ ಸಂಗ್ರಹಣೆಯ, ವೈಜ್ಞಾನಿಕ ವ್ಯವಸ್ಥೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದರು.
ನಗರ ವ್ಯಾಪ್ತಿಯಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಪರಿವೀಕ್ಷಕರೂ, ಸಮುದಾಯ ಅಭಿವೃಧಿ ಅಧಿಕಾರಿಗಳು ಹಾಗೂ ಇತರ ಸಿಬ್ಬಂದಿಗಳನ್ನು ನಿಯೋಜಿಸಿ ಕಸ ಬೇರ್ಪಡಿಸುವ ಕುರಿತು ಜಾಗೃತಿ ಮೂಡಿಸಿ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರ ವ್ಯಾಪ್ತಿಯಲ್ಲಿ ನೀರು ಸರಬರಾಜು ವ್ಯವಸ್ಥೆ ಸಮರ್ಪಕವಾಗಿರಬೇಕು, ನೀರು ಪೆÇೀಲಾಗದಂತೆ ಗಮನಹರಿಸಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಮೃತ ಯೋಜನೆ ತ್ವರಿತವಾಗಿ ಜಾರಿಯಾಗಬೇಕು, ಕೊಳವೆ ಬಾವಿ ಕೊರೆಯುವುದನ್ನು ತಪ್ಪಿಸಿ ಹೇಮಾವತಿ ನದಿ ನೀರು ಎಲ್ಲಾ ವಾರ್ಡ್‍ಗಳಿಗೆ ಪೂರೈಕೆಯಾಗುವಂತೆ ಯೋಜಿತ ಕ್ರಮ ಅನುಷ್ಠಾನ ಮಾಡಬೇಕು ಎಂದರು.
ಮನೆ, ವಾಣಿಜ್ಯ ಮಳಿಗೆಗಳ ನಿರ್ಮಾಣದ ವೇಳೆ ಪರವಾನಗಿ ಶುಲ್ಕವನ್ನು ಚದರಡಿ ಆಧಾರದ ಮೇಲೆ ನಿಯಾಮನುಸಾರ ನಿಗಧಿ ಪಡಿಸಿ. ಜೊತೆಗೆ ಅಪಾರ್ಟ್‍ಮೆಂಟ್‍ಗಳ ಒಟ್ಟು ನಿರ್ಮಾಣ ವಿಸ್ತಿರ್ಣದ ಅಳತೆ ಮೇಲೆ ತೆರಿಗೆ ಪಡೆಯಿರಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಎ.ಪಿ.ಎಂ.ಸಿ. ಯಾರ್ಡ್ ಬಳಿ ರಸ್ತೆ ಬದಿ ಕಸ ಸುರಿಯುತ್ತಿದ್ದು ತಪ್ಪಿತಸ್ತರನ್ನು ಪತ್ತೆ ಮಾಡಿ ದಂಡ ವಿಧಿಸಿ ನಗರ ವ್ಯಾಪ್ತಿಯನ್ನು ಸ್ವಚ್ಚವಾಗಿರಿಸಿ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಗುಂಡಿ ಮುಚ್ಚುವ ಕಾರ್ಯಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಗಿರೀಶ್ ತಿಳಿಸಿದರು.
ನಗರಸಭೆ ಆಯುಕ್ತರಾದ ಕೃಷ್ಣಮೂರ್ತಿ ಹಾಗೂ ನಗರಸಭೆಯ ಇಂಜಿನಿಯರ್ ಗಳು ಹಾಗೂ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.