ನಾಗಮಂಗಲದಲ್ಲಿ ಶಾಂತಿ ಮರು ಸ್ಥಾಪನೆಗೆ  ಕ್ರಮ ಕೈಗೊಳ್ಳಿ-ಹೆಚ್ ಡಿ ಕೆ ಆಗ್ರಹ

ಬೆಂಗಳೂರು: ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿರುವ ಘಟನೆಯನ್ನು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಉಗ್ರವಾಗಿ ಖಂಡಿಸಿದ್ದಾರೆ.

ಗಣಪತಿ ದೇವರ ಮೆರವಣಿಗೆಯಲ್ಲಿ ಶಾಂತಿಯಿಂದ ತೆರಳುತ್ತಿದ್ದ ಭಕ್ತರನ್ನು ಗುರಿ ಮಾಡಿ ಒಂದು ಸಮುದಾಯದ ಪುಂಡರು ಉದ್ದೇಶಪೂರ್ವಕವಾಗಿಯೇ ದಾಂಧಲೆ ಮಾಡಿ ಸಾರ್ವಜನಿಕರು-ಪೊಲೀಸರ ಮೇಲೆ ಕಲ್ಲು, ಚಪ್ಪಲಿ ಎಸೆದು ಪೆಟ್ರೋಲ್ ಬಾಂಬ್ ಸ್ಫೋಟಿಸಿ ತಲ್ವಾರ್ ಝಳಪಿಸುವ ಮೂಲಕ ದುಸ್ಸಾಹಸ ಮಾಡಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ವೈಫಲ್ಯಕ್ಕೆ ಕಾರಣರಾಗಿದ್ದಾರೆ‌ ಎಂದು ಟ್ವೀಟ್‌ ಮಾಡಿ ಕಿಡಿಕಾರಿದ್ದಾರೆ.

ಪೊಲೀಸ್ ಠಾಣೆ ಎದುರು ರಕ್ಷಣೆ ಕೊಡಿ ಎಂದು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರ ಮೇಲೂ  ಪುಂಡರು ದಬ್ಬಾಳಿಕೆ ನಡೆಸುತ್ತಾರೆ ಎಂದರೆ ನಾವು ಎಲ್ಲಿದ್ದೇವೆ ಎನ್ನುವ ಅನುಮಾನ ಬರುತ್ತದೆ. ಇಲ್ಲಿ ಸ್ಥಳೀಯ ಪೊಲೀಸರ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದು ಗರಂ ಆಗಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ಮತ್ತು ರಾಜ್ಯ ಸರ್ಕಾರ ರಾಜಕೀಯ ಸ್ವಾರ್ಥಕ್ಕಾಗಿ ಒಂದು ನಿರ್ದಿಷ್ಟ ಸಮುದಾಯವನ್ನು ಅತಿಯಾಗಿ ಓಲೈಸಿ ತುಷ್ಟೀಕರಣ ಮಾಡಿದ್ದರ ಫಲವಾಗಿ ನಾಗಮಂಗಲದಲ್ಲಿ ಈ ಹೇಯ ಘಟನೆ ನಡೆದಿದೆ ಎಂದು ಹೆಚ್ ಡಿ ಕೆ ಜರಿದಿದ್ದಾರೆ.

ಸಾರ್ವಜನಿಕರು ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿರುವ ಕುಮಾರಸ್ವಾಮಿ, ತಕ್ಷಣವೇ ಪಟ್ಟಣದಲ್ಲಿ ಶಾಂತಿ ಮರುಸ್ಥಾಪನೆ ನಿಟ್ಟಿನಲ್ಲಿ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.