ಬೆಂಗಳೂರು: ರಾಜ್ಯದಲ್ಲಿ ವಾರಾಂತ್ಯದ ಲಾಕ್ಡೌನ್ ಹಾಗೂ ನೈಟ್ಕರ್ಫ್ಯೂ ಬೇಕೆ, ಬೇಡವೇ ಎಂಬುದನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜನರಿಗೆ ತೊಂದರೆ ಕೊಟ್ಟು ಇಲ್ಲವೆ ಅವರ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಪಡಿಸಿ ಲಾಕ್ಡೌನ್ ಇಲ್ಲವೆ ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕೆಂಬ ದುರುದ್ದೇಶ ಸರ್ಕಾರಕ್ಕೂ ಇಲ್ಲ. ಏನೇ ಕ್ರಮ ಕೈಗೊಂಡರೂ ವೈಜ್ಞಾನಿಕ ನೆಲೆಗಟ್ಟಿನ ಮೇಲೆ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ತಜ್ಞರು ಕಾಲಕಾಲಕ್ಕೆ ನೀಡುವ ಶಿಫಾರಸಿನ ಆಧಾರದ ಮೇಲೆ ಸರ್ಕಾರ ಮುನ್ನಡೆಯಬೇಕಾಗುತ್ತದೆ. ಒಬ್ಬರಿಗೆ ತೊಂದರೆ ಕೊಟ್ಟು ಇನ್ನೊಬ್ಬರಿಗೆ ಅನುಕೂಲ ಮಾಡಬೇಕೆಂಬ ಉದ್ದೇಶ ನಮಗೂ ಇಲ್ಲ. ಜನರ ಜೀವ ಮತ್ತು ಜೀವನ ಎರಡೂ ಮುಖ್ಯ ಎಂದು ಹೇಳಿದರು.
ಪ್ರತಿಯೊಬ್ಬರ ರಕ್ಷಣೆ ಮಾಡಬೇಕೆಂಬ ಕಾರಣಕ್ಕಾಗಿ ಕೆಲವು ಸಂದರ್ಭಗಳಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಸರ್ಕಾರಕ್ಕೆ ಕೆಟ್ಟ ಹೆಸರು ಬರುವುದಿಲ್ಲವೆ ಎಂದು ಪ್ರಶ್ನಿಸಿದರು.
ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಹತ್ವದ ಸಭೆ ಕರೆದಿದ್ದಾರೆ. ತಜ್ಞರು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.
ಸಭೆಯಲ್ಲಿ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿಗಳು ಉತ್ತಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಇನ್ನು ಮುಂದೆ ಪ್ರತಿದಿನ 1,20,000 ಕೋವಿಡ್ ಪ್ರಕರಣಗಳು ಬರುವ ಸಾಧ್ಯತೆಗಳಿವೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ. ಕಡಿಮೆ ಎಂದರೂ 60 ರಿಂದ 70 ಸಾವಿರ ಪ್ರಕರಣಗಳು ದಾಖಲಾಗಬಹುದು. ಇದರ ಬಗ್ಗೆಯೂ ನಾವು ಚಿಂತಿಸಬೇಕಿದೆ ಎಂದು ತಿಳಿಸಿದರು.
ತಜ್ಞರ ಸಲಹೆಯಂತೆ ಸರ್ಕಾರ ಮುನ್ನಡೆಯಲಿದೆ. ಅವರು ನೀಡುತ್ತಿರುವ ಶಿಫಾರಸುಗಳನ್ನು ನಾವು ಅನುಷ್ಠಾನ ಮಾಡುತ್ತಿದ್ದೇವೆ. ನಾಳೆ ಯಾವ ಶಿಫಾರಸು ನೀಡುತ್ತಾರೋ ನೋಡೋಣ ಎಂದು ತಿಳಿಸಿದರು.
ಜನತೆಗೆ ಒಳ್ಳೆಯದಾಗುತ್ತದೆ ಎನ್ನುವುದಾದರೆ ಸರ್ಕಾರವೂ ಒಳ್ಳೆಯ ನಿರ್ಧಾರ ಮಾಡಲಿದೆ ಎಂದರು.
ರಾಜಧಾನಿ ಬೆಂಗಳೂರಿಗೆ ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡಬೇಕೆ, ಬೇಡವೆ ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ. ಇಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಬಗ್ಗೆ ನಮಗೂ ಆತಂಕವಿದೆ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡೇ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.