ನಿರ್ಜೀವತೆಗೂ ಜೀವಂತಿಕೆ ನೀಡುವ ಕಲೆ ಕಲಾವಿದರಲ್ಲಿ ಅಡಗಿದೆ

ಕಲಬುರಗಿ: ನಿರ್ಜೀವತೆಗೂ ಜೀವಂತಿಕೆ ನೀಡಬಲ್ಲ ಕಲೆ ಕಲಾವಿದರಲ್ಲಿ ಅಡಗಿದೆ ಎಂಬುದಕ್ಕೆ ರಂಗಾಯಣದ ಆವರಣದಲ್ಲಿ ನಡೆದ ಸಿಮೆಂಟ್ ಮತ್ತು ಫೈಬರ್ ಶಿಲ್ಪಕಲಾ ಶಿಬಿರದಲ್ಲಿ ಅರಳಿದ ಶಿಲ್ಪಗಳೇ ಸಾಕ್ಷಿಯಾಗಿವೆ ಎಂದು ಸೇಡಂ ಶಾಸಕ ರಾಜಕುಮಾರ್ ಪಾಟೀಲ ತೇಲ್ಕೂರ್ ಅಭಿಪ್ರಾಯಪಟ್ಟರು.
ನಗರದ ರಂಗಾಯಣ ಆವರಣದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಮತ್ತು ರಂಗಾಯಣ ಸಹಯೋಗದೊಂದಿಗೆ ಕಳೆದ 15 ದಿನದಿಂದ ನಡೆಯುತ್ತಿರುವ ಸಿಮೆಂಟ್ ಮತ್ತು ಫೈಬರ್ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಕಲಾವಿದನ ಕುಂಚದಲ್ಲಿ ಅರಳಿದ ಅನೇಕ ಶಿಲ್ಪಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕ ಭಾಗದ ಕಲಾವಿದರಿಗೆ ಅನುಕೂಲವಾಗಲು ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಉಪಯುಕ್ತ ಶಿಬಿರ ಇಲ್ಲಿ ಏರ್ಪಡಿಸುವುದು ಈ ಭಾಗದ ಕಲಾವಿದರಿಗೆ ತುಂಬಾ ಅನುಕೂಲವಾಗಿದೆ. ಹಿಂದುಳಿದ ಹಣೆಪಟ್ಟಿಯನ್ನು ಕಳಚಲು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸುವ ಅಗತ್ಯವಿದೆ ಎಂದರು.
ಶಿಬಿರದಲ್ಲಿ ಹಿರಿಯ ಮತ್ತು ಕಿರಿಯ ಕಲಾವಿದರಿಂದ ಮೂಡಿಬಂದ ಶಿಲ್ಪಗಳನ್ನು ನೋಡಿ ಸಂತಸಗೊಂಡ ಶಾಸಕ ರಾಜಕುಮಾರ ಪಟೀಲ ಅವರು ಪ್ರೋತ್ಸಾಹ ರೂಪದಲ್ಲಿ ಕಲಾವಿದರಿಗೆ 51 ಸಾವಿರ ರೂ. ಕಾಣಿಕೆ ನೀಡಿದರು.
ಕಲಬುರಗಿ ರಂಗಾಯಣದ ನಿರ್ದೇಶಕ ಪ್ರಭಾಕರ ಜೋಶಿ ಸಮಾರೋಪ ನುಡಿಗಳನ್ನಾಡಿ ಅಕಾಡೆಮಿಯಿಂದ ಶಿಲ್ಪಕಲಾ ಶಿಬಿರ ಆಯೋಜಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಅತ್ಯುತ್ತಮ ಕಾಣಿಕೆಯಾಗಿ ನೀಡಿದೆ ಎಂದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಿರಿಯ ಚಿತ್ರಕಲಾವಿದ ಬಸವರಾಜ ಜಾನೆ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವಾನಂದ ಬಂಟನೂರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ಅವರುಗಳು ಶಿಬಿರದಲ್ಲಿ ಮೂಡಿಬಂದ ಶಿಲ್ಪಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಅಕಾಡೆಮಿ ಸದಸ್ಯರಾದ ಮನೋಹರ ಪತ್ತಾರ ವಿಜಯಪುರ, ಜಗದೀಶ ದೊಡ್ಡಮನಿ ಬಾಗಲಕೋಟೆ, ನವೀನ್ ಕಡ್ಲಾಸಪೂರ, ಶಿಬಿರದ ನಿರ್ದೇಶಕ ಆರ್. ವೇಣುಗೋಪಾಲ್, ಕಲಬುರಗಿಯ ಹಿರಿಯ ಕಲಾವಿದರಾದ ಡಾ.ವಿ.ಜಿ.ಅಂದಾನಿ, ಡಾ. ಎ.ಎಸ್. ಪಾಟೀಲ ಸೇರಿದಂತೆ ಇನ್ನಿತರ ಹಿರಿಯ ಕಲಾವಿದರು ಉಪಸ್ಥಿತರಿದ್ದರು.
ಅಕಾಡೆಮಿ ಸದಸ್ಯ ಸಂಚಾಲಕ ನಟರಾಜ ಶಿಲ್ಪಿ ಸ್ವಾಗತಿಸಿದರು. ಕಲಬುರಗಿ ರಂಗಾಯಣದ ಆಡಳಿತಾಧಿಕಾರಿ ಜಗದೀಶ್ವರಿ ಶಿವಕೇರಿ ವಂದಿಸಿದರು. ಶಿವಾನಂದ ಅಣಜಗಿ ನಿರೂಪಿಸಿದರು.