ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿರುವುದಕ್ಕೂ ಸಿಎಂ ಸಿದ್ದರಾಮಯ್ಯ ಅವರ ಮುಡಾ ಹಗರಣಕ್ಕೂ ವ್ಯತ್ಯಾಸವಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಜನ ಪಕ್ಷಪಾತ ಮಾಡಿದ್ದಾರೆ. ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನನ್ನು ಕಬಳಿಸಿದ್ದಾರೆ. ನಿರ್ಮಲಾ ಸೀತಾ ರಾಮನ್ ಅವರು ತಮ್ಮ ಸ್ವಂತಕ್ಕಾಗಿ ಏನೂ ಮಾಡಿಲ್ಲ. ಆ ಹಣ ಪಕ್ಷಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷಕ್ಕೆ 1,200 ಕೋಟಿ ರೂ.ಗೂ ಅಧಿಕ ಹಣ ಹೋಗಿದೆ,ಆ ಹಣವನ್ನು ಮೊದಲು ವಾಪಸ್ ನೀಡಲಿ, ಆ ನಂತರ ಸಚಿವರ ರಾಜೀನಾಮೆ ಕೇಳಲಿ ಎಂದು ತಿರುಗೇಟು ನೀಡಿದರು.
ಎಲ್ಲ ಪಕ್ಷಗಳು ದೇಣಿಗೆ ಸಂಗ್ರಹ ಮಾಡಿವೆ. ಹೀಗೆ ಹಣ ತೆಗೆದುಕೊಂಡವರ ಮೇಲೆ ಎಫ್ಐಆರ್ ದಾಖಲಿಸು ವುದಾದರೆ, ಎಲ್ಲರ ಮೇಲೂ ದಾಖಲಿಸ ಬೇಕಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರೇ ಯಾರಿಂದಲೋ ಹೇಳಿಸಿ ದೂರು ದಾಖಲಿಸಿ ದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗೆ ದೂರು ದಾಖಲಿಸಿರುವುದು ರಾಜಕೀಯ ಪ್ರೇರಿತ ಎಂದು ದೂರಿದರು.
ಸಿಎಂ ಸಿದ್ದರಾಮಯ್ಯನವರ ಪ್ರಕರಣ ಕ್ಯಾಬೆನೆಟ್ನಲ್ಲಿ ಚರ್ಚೆಯಾಗಿರಲಿಲ್ಲ. ಆದರೆ ಚುನಾವಣಾ ಬಾಂಡ್ ಬಗ್ಗೆ ಕ್ಯಾಬಿನೆಟ್ನಲ್ಲೇ ಚರ್ಚೆಯಾಗಿ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಮುಡಾ ಹಗರಣದ ಆರೋಪ ದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ನಾಯಕರು ಹೀಗೆ ಮಾತಾಡುತ್ತಿದ್ದಾರೆ. ಮೊದಲು ಲೋಕಾಯುಕ್ತ ಮುಚ್ಚಿಹಾಕಲು ಪ್ರಯತ್ನ ಮಾಡಿದ್ದರು. ಈಗ ಸಿಬಿಐ ಅಧಿಕಾರ ಕಿತ್ತುಕೊಳ್ಳಲು ಕ್ರಮ ವಹಿಸಿ ದ್ದಾರೆ. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ದ್ದಾಗ ಅನೇಕ ಹಗರಣಗಳನ್ನು ಮಾಡಿ ನುಂಗಿ ನೀರು ಕುಡಿದಿದ್ದರು ಎಂದು ಟೀಕಾಪ್ರಹಾರ ನಡೆಸಿದರು.
ಮುಖ್ಯಮಂತ್ರಿ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದರೆ, ಅವರು ಪೊಲೀಸರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅದಕ್ಕಾಗಿ ರಾಜೀನಾಮೆ ನೀಡಲು ಆಗ್ರಹಿಸುತ್ತಿ ದ್ದೇವೆ ಎಂದು ಅಶೋಕ್ ತಿಳಿಸಿದರು.