ನಿಯಮಬಾಹಿರವಾಗಿ ಡ್ರೋಣ್ ಹಾರಾಟ : ಬೆಚ್ಚಿ ಬಿದ್ದ ಆನೆ; ನೆಟ್ಟಿಗರ ಆಕ್ರೋಶ

(ವರದಿ: ರಾಮಸಮುದ್ರ ಎಸ್. ವೀರಭದ್ರಸ್ವಾಮಿ)

ಚಾಮರಾಜನಗರ: ತಾಲ್ಲೂಕಿನ ಗುಂಡ್ಲುಪೇಟೆ ವ್ಯಾಪ್ತಿಯ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ನಿಯಮಬಾಹಿರವಾಗಿ ಡ್ರೋಣ್ ಕ್ಯಾಮೆರಾ ಹಾರಾಡಿಸಲಾಗಿದ್ದು ಸಮೀಪದಲ್ಲಿದ್ದ ಆನೆ ಕೂಡ ಬೆಚ್ಚಿದೆ.

ಕಳೆದ ಶನಿವಾರ ಬೆಟ್ಟಕ್ಕೆ ಆಗಮಿಸಿದ್ದ ಪ್ರಭಾವಿಗಳು ಸ್ವಂತ ವಾಹನದಲ್ಲಿ ಹೋಗಿದ್ದಾರೆ.

ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಡ್ರೋಣ್ ಕ್ಯಾಮೆರಾ ಬಳಸಿ ದೇವಾಲಯದ ಸಮೀಪವೇ ಚಿತ್ರೀಕರಣ ನಡೆಸಿದ್ದಾರೆ, ಅಷ್ಟೆ ಅಲ್ಲ ಇದನ್ನು ಸಾಮಾಜಿಕ ಜಾಲತಾಣದಲ್ಲೂ  ಪೋಸ್ಟ್ ಮಾಡಿದ್ದಾರೆ.

ಆನೆಯ ಫೋಟೋಗಳು ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದ್ದಂತೆ ಮಂಗಳವಾರ ಎಡಿಟ್ ಮಾಡಿದ ವೀಡಿಯೋ ಸಹಾ ಅಪ್‌ಲೋಡ್ ಮಾಡಿದ್ದಾರೆ, ಇದು ನೆಟ್ಟಿಗರ ಪಿತ್ತ ನೆತ್ತಿಗೇರಿಸಿದೆ.

ಸಂಜೆ ನಾಲ್ಕು ಗಂಟೆ ನಂತರ ಒಬ್ಬರನ್ನೂ ಬೆಟ್ಟದ ಮೇಲೆ ಇರಲು ಬಿಡದ ಅರಣ್ಯ ಇಲಾಖೆ 6 ಗಂಟೆವರೆಗೂ ಇರಲು ಡ್ರೋಣ್ ಕ್ಯಾಮೆರಾ ಬಳಸಲು ಹೇಗೆ ಒಪ್ಪಿಗೆ ನೀಡಿತು ಎಂದು ಪರಿಸರ ಪ್ರೇಮಿಗಳು ಹರಿಹಾಯ್ದಿದ್ದಾರೆ.

ಸಾರ್ವಜನಿಕರಿಗೆ ಒಂದು ನ್ಯಾಯ ಪ್ಭಾವಿಗಳಿಗೊಂದು ನ್ಯಾಯಾನಾ?

ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಣ್ಣ ತೊಂದರೆಯಾದರೂ ಕಾಯ್ದೆ ಕಟ್ಟಲೆಗಳು ಕಟುವಾಗಿ ಬರುವಾಗ ಡ್ರೋಣ್ ಶಬ್ದ ಮಾಡದೆ ಹಾರಿತ್ತೆ ಎಂಬ ಅನುಮಾನ ಮೂಡಲಾರಂಬಿಸಿದೆ.

ಹಿಂದೆ ಕೆ.ಎ.ಎಸ್. ಅಧಿಕಾರಿಯೊಬ್ಬರು ಆನೆಗೆ ಪ್ರಸಾದ ಕೊಟ್ಟ ತಪ್ಪಿಗೆ ಪ್ರಕರಣ ದಾಖಲಾದರೂ ಮುಚ್ಚಿಹೋಯ್ತು.

ಕಳೆದ ತಿಂಗಳು ಸ್ಥಳೀಯರೊಬ್ಬರು ಡ್ರೋಣ್ ಬಳಸಿ ಬೆಟ್ಟದ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು,ಆಗ ಕೂಡಾ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ.

ಈಗಲೂ ಅದೇ ಕೆಲಸ ಮುಂದುವರೆದಿದೆ. ಆದರೆ ಅರಣ್ಯ ಇಲಾಖೆ ಮಾತ್ರ ಡ್ರೋಣ್ ಬಳಕೆ ಸಂಬಂದ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನೆಟ್ಟಿಗರು ಪೋಸ್ಟ್ ಮಾಡಿದ್ದಾರೆ.

ಡ್ರೋಣ್ ಬಳಸಿ ಚಿತ್ರೀಕರಣ ಮಾಡಲು ಯಾವುದೇ ಅನುಮತಿ ನೀಡಿಲ್ಲ. ಈ ಬಗ್ಗೆ ವಲಯ ಅರಣ್ಯಾಧಿಕಾರಿಗೆ ನೊಟೀಸ್ ನೀಡಲಾಗುವುದು ಎಂದು ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಡಾ.ಪಿ.ರಮೇಶ್ ಕುಮಾರ್ ತಿಳಿಸಿದ್ದಾರೆ.