ಒಂದೆರಡು ದಿನದಲ್ಲಿ ಬಾಂಬ್ ಬ್ಲಾಸ್ಟ್ ಪ್ರಕರಣ ಎನ್ ಐ ಎ ಹೆಗಲಿಗೆ -ಆರಗ

ಮಂಗಳೂರು: ಒಂದೆರಡು ದಿನಗಳಲ್ಲಿ ಶಂಕಿತ ಉಗ್ರನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಮಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಅವರು ಮಾತನಾಡಿದರು.

ಕುಕ್ಕರ್ ಬ್ಲಾಸ್ಟ್ ಪ್ರಕರಣದ ತನಿಖೆಯಲ್ಲಿ ನಮ್ಮ ಪೊಲೀಸರೊಂದಿಗೆ ಎನ್ ಐ ಎ ಕೂಡಾ ಸೇರಿದೆ.

ಒಂದೆರಡು ದಿನಗಳಲ್ಲಿ ಪೂರ್ಣವಾಗಿ ಪ್ರಕರಣವನ್ನು ಎನ್ ಐ‌ ಎ ಹೆಗಲಿಗೆ ವಹಿಸುವ ಸಂಬಂಧ ನಿರ್ಧರಿಸಲಾಗುವುದು ಎಂದು ಹೇಳಿದರು.

ಶಂಕಿತ‌ ಉಗ್ರ ಶಾರೀಕ್ ಕರ್ನಾಟಕ ಸೇರಿ ಮತ್ತೆ ಯಾವ ರಾಜ್ಯಗಳಲ್ಲಿ ಸಂಚರಿಸಿದ್ದ ಎಂಬುದರ ಬಗ್ಗೆ ಪೊಲೀಸರು ಪೂರ್ಣ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಆಟೋದಲ್ಲಿ ಶಂಕಿತ ಉಗ್ರ ಶಾರೀಕ್ ಕುಕ್ಕರ್ ಸಾಗಿಸುವಾಗ ಬ್ಲಾಸ್ಟ್ ಆಗಿದ್ದರಿಂದ ಚಾಲಕ ಪುರುಷೋತ್ತಮ್ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದರೆ ಆಟೋಚಾಲಕ ಉಗ್ರನಲ್ಲ,ಈ ಪ್ರಕರಣಕ್ಕೂ ಚಾಲಕ ಪುರುಷೋತ್ತಮನಿಗೂ ಯಾವುದೇ‌ ಸಂಬಂಧವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಅವರ ಚಿಕಿತ್ಸೆಯ‌ ಸಂಪೂರ್ಣ ‌ವೆಚ್ಚವನ್ನು ಸರ್ಕಾರವೇ ಭರಿಸಲಿದೆ‌.ಈ ಬಗ್ಗೆ ಸಿಎಂ ಜತೆ ಮಾತನಾಡುತ್ತೇನೆ ಎಂದು ಆರಗ ತಿಳಿಸಿದರು.

ಶಂಕಿತ ಉಗ್ರ ಶಾರೀಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಆತನ ಕುತ್ತಿಗೆ ಮುಖ,ಕೈಗಳಿಗೆ ಸುಟ್ಟ ಗಾಯಗಳಾಗಿವೆ.ಆತ ಚೇತರಿಸಿಕೊಂಡ ನಂತರ ಇನ್ನಷ್ಟು ಸತ್ಯ ಬಯಲಾಗಲಿದೆ ಎಂದು ಗೃಹ ‌ಸಚಿವರು ತಿಳಿಸಿದರು.