ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಓಶೋ ರಜಿನೀಶ್ ರ ಜನ್ಮದಿನವಿಂದು.
ಮೂವತ್ತು ವರ್ಷಗಳ ಕಾಲ ಜಗತ್ತಿನ ಬಹುತೇಕ ವಿಷಯಗಳ ಕುರಿತು ಅತ್ಯಂತ ಅಧಿಕಾರಯುತವಾಗಿ ಮಾತನಾಡಿ ಹೊಸ ಅಂತರ್ ದೃಷ್ಟಿಯ ಸೃಷ್ಟಿಸಿದ, ಪೂರ್ವ ಮತ್ತು ಪಾಶ್ಚಿಮಾತ್ಯದ ಸಮಾಗಮ ಓಶೋ.
ಆದರೆ ಯಾವುದೇ ಧರ್ಮ, ದೇಶ, ಗಡಿ, ಭಾಷೆಯ ಸೀಮಿತಕ್ಕೆ ಒಳಗಾಗದೆ ಇಡೀ ಅಸ್ತಿತ್ವದಲ್ಲಿ ಸೇರ್ಪಡೆಗೊಂಡು ಬದುಕಿ ಬದುಕುವ ಅರಿವನ್ನು ಬೋಧಿಸಿದ ಆಧುನಿಕ ಝೆನ್ ಎಂದು ಗುರು ಎಂದು ಕರೆಯಬಹುದು.
ಆಚಾರ್ಯ ರಜನೀಶ್ ಅವರ ಪ್ರಭಾವಕ್ಕೆ ಒಳಗಾದವರು ಜಗತ್ತಿನ ತುಂಬ ಕೋಟ್ಯಾಂತರ ಜನ ಸಿಗುತ್ತಾರೆ. ಪ್ರಪಂಚದ ಎಲ್ಲೆಡೆ ಓಶೋ ವಿಚಾರಗಳನ್ನು ಮುಕ್ತವಾಗಿ ಯಾವುದೇ ಪೂರ್ವಗ್ರಹಪೀಡಿತರಾಗದೇ ಒಪ್ಪಿಕೊಂಡು ಅಪ್ಪಿಕೊಂಡವರು ಸಹ ಲಕ್ಷಾಂತರ ಜನ.
ಓಶೋ ಮಾತನಾಡಿರದೇ ಇರುವ ವಿಷಯಗಳು, ವಿಶೇಷ ವ್ಯಕ್ತಿಗಳು ಬಹುಶಃ ಯಾರೂ ಇಲ್ಲ ಎನ್ನಬಹುದು. ಆತನ ಕಾಲಘಟ್ಟದ ಪರಿಧಿಯ ಅಂಚಿನವರೆಗೂ ಜಗತ್ತಿಗೆ ವಿಶೇಷರೂ ಅಂತ ಚಿರಪರಿಚಿತರಾದ ಎಲ್ಲರ ಕುರಿತು ಓಶೋ ಮುಕ್ತವಾಗಿ ಮಾತನಾಡಿದ್ದಾರೆ.
ಅತ್ಯಂತ ಪ್ರಭಾವಶಾಲಿಯಾಗಿ ಹೊಳೆಯುವ ನೇತ್ರಗಳು, ತುಂಬಾ ಶಾಂತಿಯಿಂದ ಕಂಗೊಳಿಸುತ್ತಿರುತ್ತವೆ ಆ ನಯನಗಳು. ಸಮಾಧಾನ ಚಿತ್ತದ ಮಾತುಗಳು, ಉದ್ದನೆಯ ಗಡ್ಡ, ವಿಶಿಷ್ಟವಾದ ಆಕರ್ಷಕ ಉಡುಪು. ಪ್ರತಿ ಮಾತಿನಲ್ಲಿ ಸಹ ಅತ್ಯಂತ ತಲ್ಲೀನತೆ, ಹೊಸತನ, ತಲೆಮೇಲೊಂದು ವಿಶಿಷ್ಟ ಟೊಪ್ಪಿಗೆ. ಆತನ ಮಾತುಗಳನ್ನು ಆಲಿಸುವಾಗ ಆತನ ಚಲನೆಯಲ್ಲಿ ಮಾತಿನಲ್ಲೆ ಬುದ್ಧನ ಪ್ರೀತಿ ಅರಿವಿನ ಸೌಂದರ್ಯದ ಪ್ರತೀಕವಾಗಿ ಜಗತ್ತಿಗೆ ಕಂಡು ಬರುತ್ತಾರೆ ಓಶೋ.
ಓಶೋ ಅವರು ಜನಿಸಿದ್ದು ಮಧ್ಯಪ್ರದೇಶದ ಕುಚ್ ವಾಡಾ ಗ್ರಾಮದಲ್ಲಿ ಡಿಸೆಂಬರ್ 11, 1931ರಂದು. ಮಾರ್ಚ್ 21,1953ರಂದು ಅವರು ಜಿವನದಲ್ಲಿ ಪರಮ ಸಿದ್ಧಿಯನ್ನು ಪಡೆದರೆಂದು ಹೇಳಲಾಗುತ್ತದೆ. 1960ರ ದಶಕದಲ್ಲಿ ಆಚಾರ್ಯ ರಜನೀಶ ಎಂದು, 1970ರ ದಶಕ ಹಾಗೂ 1980ರ ದಶಕಗಳಲ್ಲಿ ಭಗವಾನ್ ರಜನೀಶ್ ಎಂದು ಮತ್ತು ಬಳಿಕ ಓಶೊ ಎಂದೂ ಪರಿಚಿತವಾಗಿದ್ದ ಚಂದ್ರ ಮೋಹನ್ ಜೈನ್ (1931-1990)ಅಂತರರಾಷ್ಟ್ರೀಯ ಅನುಯಾಯಿಗಳನ್ನು ಹೊಂದಿರುವ ಭಾರತೀಯ ಗುರು, ಆಧ್ಯಾತ್ಮಿಕ ಶಿಕ್ಷಕ. ಆದರೆ ಇಷ್ಟನ್ನೇ ಹೇಳಿದರೆ ಓಶೋ ವ್ಯಕ್ತಿತ್ವ ದರ್ಶನವಾಗಲಾರದು.
ಓಶೋ ಎಂಬುದು ನಾಮಪದವಲ್ಲ. ಅದೊಂದು ಗುಣ. ಅದೊಂದು ಸ್ಥಿತಿ. ವಿಲಿಯಮ್ ಜೇಮ್ಸ್ ರ ಶಬ್ದಕೋಶದಲ್ಲಿ ಓಶೋ ಎಂದರೆ ಸಾಗರದಷ್ಟು ವಿಶಾಲತೆಯನ್ನು ಹೊಂದಿದವರು ಎಂದರ್ಥ.
ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ರಜನೀಶ್ 1960ರ ದಶಕದಲ್ಲಿ ಸಾರ್ವಜನಿಕ ಭಾಷಣಕಾರರಾಗಿ ದೇಶಾದ್ಯಂತ ಪ್ರಯಾಣ ಮಾಡಿದರು. ಅವರ ಮುಚ್ಚುಮರೆಯಿಲ್ಲದ ಮಾತುಗಳನ್ನು ವಿವಾದಾತ್ಮಕ ವ್ಯಕ್ತಿಯನ್ನಾಗಿಸಿದವು. ಲೈಂಗಿಕತೆಯ ಬಗ್ಗೆ ಮುಕ್ತವಾಗಿ ಮಾತನಾಡುವ ರಜನೀಶ್ ಅವರನ್ನು ಸೆಕ್ಸ್ ಗುರು ಎಂದು ಟೀಕಿಸಿದರು.
ಆದರೆ ಓಶೋ ಅದಕ್ಕೆ ಮಾತ್ರ ಸೀಮಿತರಲ್ಲ. ಎಲ್ಲ ವಿಷಯಗಳ ಬಗ್ಗೆ ತರ್ಕಬದ್ಧವಾಗಿ ಮಾತನಾಡುತ್ತಿದ್ದರು. ತಾವು ಕಂಡುಕೊಂಡ ಬದುಕಿನ ಸತ್ಯವನ್ನು ಯಾವುದೇ ಮುಲಾಜಿಲ್ಲದೇ ಹೇಳುತ್ತ ಹೋದರು. ಓಶೋ ಮಾತನಾಡುವುದೇ ಕಥೆಯ ಮೂಲಕ. ಕಥೆಯಿಂದಲೇ ಮಾತು ಆರಂಭ. ಕಥೆಗೊಂದು ಕಥೆ, ಅದಕ್ಕೆ ಉಪ ಕಥೆ, ಕಥೆಯಲ್ಲಿಯೇ ಬದುಕಿನ ದರ್ಶನ.
ಅಧ್ಯಾತ್ನ, ಝೆನ್, ಬೌದ್ಧ, ಸೂಫೀ, ಪ್ರೇಮ, ಕಾಮ, ಮದುವೆ, ಬದುಕು, ವಿಡಂಬನೆ, ಸಾಮಾಜಿಕ, ರಾಜಕೀಯ…ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಹೇಳುತ್ತ ಸಭಿಕರನ್ನು ಮೋಡಿ ಮಾಡುತ್ತ ಸಾಗಿದರು.
ದೇಶವಿದೇಶಗಳಲ್ಲಿ ಅವರು ನೀಡಿದ ಉಪನ್ಯಾಸಗಳಿಗೆ ಜನರು ಮುಗಿಬಿದ್ದು ಬಂದರು. ವಿಶ್ವವಿಖ್ಯಾತರಾದರು. ಅಷ್ಟೇ ವಿವಾದಗಳನ್ನೂ ಮೈ ಮೇಲೆ ಎಳೆದುಕೊಂಡರು.
ತಮ್ಮ ಪ್ರವಚನಗಳ ಮೂಲಕ ಅವರು ಮಾನವ-ಚೇತನದ ವಿಕಾಸದ ಎಲ್ಲಾ ಸ್ತರಗಳತ್ತಲ್ಲೂ ಪ್ರಕಾಶ ಬೀರುವ ಓಶೋ, ಬುದ್ಧ, ಮಹಾವೀರ, ಕೃಷ್ಣ, ಶಿವ, ಶಾಂಡಿಲ್ಯ, ನಾರದ, ಜೀಸಸ್ ಮುಂತಾದವರೊಂದಿಗೆ ಭಾರತದ ಆಧ್ಯಾತ್ಮಿಕ ಜಗತ್ತಿನ ತಾರೆಗಳಾದ ಆದಿಶಂಕರಾಚಾರ್ಯ, ಗೋರಾಖ್, ಕಬೀರ್, ನಾನಕ್, ಮಾಲೂಕ್ ದಾಸ್, ರೈದಾಸ್, ದರಿಯಾದಾಸ್, ಮೀರಾ ಮುಂತಾದವರ ಬಗ್ಗೆ ಸಾವಿರಾರು ಪ್ರವಚನಗಳನ್ನು ನೀಡಿದ್ದಾರೆ.
ಇವರ ಪ್ರವಚನಗಳು ಸ್ಪರ್ಶಿಸದೆ ಇರುವಂತಹ ಜೀವನದ ಆಯಾಮಗಳೇ ಇಲ್ಲವೆನ್ನಬೇಕು. ಯೋಗ, ತಂತ್ರ, ಝೆನ್, ಹಸೀದ್, ಸೂಫಿ ಮುಂತಾದ ಸಾಧನೆಯ ಪರಂಪರೆಗಳ ಗೂಢ ರಹಸ್ಯಗಳ ಮೇಲೆ ಇವರು ಸವಿಸ್ತಾರವಾಗಿ ಬೆಳಕು ಚೆಲ್ಲಿದ್ದಾರೆ. ಇದರೊಟ್ಟಿಗೆ ರಾಜನೀತಿ, ಕಲೆ, ವಿಜ್ಞಾನ, ಮನೋವಿಜ್ಞಾನ, ದರ್ಶನ, ಶಿಕ್ಷಣ, ಪರಿವಾರ, ಸಮಾಜ, ಬಡತನ, ಜನಸಂಖ್ಯಾಸ್ಪೋಟ, ಪರಿಸರ ಮತ್ತು ಸಂಭವನೀಯ ಪರಮಾಣು ಯುದ್ಧ, ಏಡ್ಸ್ ಮಹಾಮಾರಿ ಮುಂತಾದ ವಿಶ್ವ-ಸಂಕಟಗಳ ಬಗ್ಗೆಯೂ ಇವರು ತಮ್ಮ ಕ್ರಾಂತಿಕಾರಕ ವಿಚಾರಗಳ ಬಗ್ಗೆ ಪ್ರವಚನ ನೀಡಿದ್ದಾರೆ.
ತಮ್ಮ ಪ್ರವಚನಗಳಿಂದ ಆಧುನಿಕ ಜಗತ್ತಿನಲ್ಲಿ ಆಧ್ಯಾತ್ಮಿಕತೆಯ ಬಿರುಗಾಳಿಯನ್ನೇ ಸೃಷ್ಟಿಸಿದವರು ಅವರು. ಉಪನಿಷತ್ತುಗಳು, ಭಗವದ್ಗೀತೆ, ಧಮ್ಮಪದ, ಝೆನ್ಕಥೆಗಳು, ಶಿವಸೂತ್ರಗಳು ಹೀಗೆ ಜಗತ್ತಿನ ಹಲವು ಧಾರೆಗಳ ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳಿಗೆ ಹೊಸದಾದ ಕಳೆಯನ್ನು ನೀಡಿದರು.
ಕೃಷ್ಣ, ಬುದ್ಧ, ಯೇಸು, ಕಬೀರ್, ಮೀರಾ, ಇಂಥ ಹಲವರು ಮಹಾತ್ಮರ ಉಪದೇಶಗಳನ್ನು ಆಧುನಿಕ ಜಗತ್ತಿಗೆ ಅಳವಡುವಂತೆ ಬಗ್ಗಿಸಿದರು. ಅಪಾರ ಓದು, ಒಳನೋಟಗಳಿಂದ ದಕ್ಕಿಸಿಕೊಂಡ ಅವರ ಅರಿವಿನ ಬೆಳಕಿನ ಮೂಲಕ ಆಧ್ಯಾತ್ಮಿಕಲೋಕದ ವಿಸ್ಮಯ ತೆರೆದಿಟ್ಟರು.
ನೀವೆಲ್ಲರೂ ಬುದ್ಧರೇ ಹೌದು. ನೀವು ನಿದ್ರಿಸುತ್ತಿರಬಹುದು, ಕನಸನ್ನು ಕಾಣುತ್ತಿರಬಹುದು; ಆದರೆ ನೀವೆಲ್ಲರೂ ಬುದ್ಧರೇ. ನಿಮ್ಮನ್ನು ಬುದ್ಧರನ್ನಾಗಿಸುವುದು ನನ್ನ ಕೆಲಸವಲ್ಲ, ಏಕೆಂದರೆ ನೀವು ಈಗಾಗಲೇ ಬುದ್ಧರಾಗಿದ್ದೀರಿ. ಅದನ್ನು ನಿಮಗೆ ನೆನಪಾಗಲು ಸಹಾಯಮಾಡುವುದಷ್ಟೆ ನನ್ನ ಕೆಲಸ, ಎಚ್ಚರಿಸುವುದಷ್ಟೆ ನನ್ನ ಕೆಲಸ…? ಹೀಗೆ ಹೇಳುತ್ತಲೇ ಅಧ್ಯಾತ್ಮದ ಹಲವು ದಾರಿಗಳನ್ನು ತೋರಿಸಿಕೊಟ್ಟವರು ಓಶೋ.
ಹೊಸ ರೀತಿಯ ಮನುಷ್ಯನ ಹುಟ್ಟಿಗೆ ಬೇಕಾದ ಪರಿಸ್ಥಿತಿಗಳನ್ನು ಸೃಷ್ಟಿಸಲು ತಾನು ಸಹಾಯ ಮಾಡುತ್ತಿದ್ದೇನೆ ಎನ್ನುವ ಓಶೋ. ಸೃಜನಶೀಲತೆಯ ಆಳ, ಅಗಲ, ಹರಿವು, ಸೃಷ್ಟಿ ಎಲ್ಲವನ್ನೂ ಒಂದು ಕಣ್ಣೋಟಕ್ಕೆ ಸಿಕ್ಕುವಂತೆ ವಿಚಾರಗಳನ್ನು ಮನದಟ್ಟು ಮಾಡುವಾಗ ಸಿಗ್ಮಂಡ್ ಫ್ರಾಯ್ಡ್, ನೀಶೆ, ಬುದ್ಧ, ಸಾಕ್ರೆಟಿಸ್, ಶಹಜಹಾನ್ ಎಲ್ಲರನ್ನೂ ಸಮೀಕರಿಸುತ್ತಾರೆ. ಅಲ್ಲಲ್ಲಿ ಝೆನ್ ಮತ್ತು ಮುಲ್ಲಾ ನಸರುದ್ದೀನ್ ಕಥೆಗಳಿಂದ ತತ್ವಜ್ಞಾನವನ್ನು ಕಡ ಪಡೆಯುತ್ತಾರೆ. ಅವೆಲ್ಲವನ್ನು ಬಳಸಿಕೊಂಡೂ ಸ್ವತಂತ್ರ ವಿಚಾರವೊಂದನ್ನು ಮಂಡಿಸುವ ಓಶೋವಿನ ಶೈಲಿಯಾಗಿದೆ. ಸಂಕೀರ್ಣ ವಿಚಾರಗಳನ್ನೂ ಸರಳವಾಗಿ ಮಂಡಿಸುವ ಕಾರಣದಿಂದಾಗಿಯೇ ಓಶೋ ಜಗತ್ತಿನೆಲ್ಲೆಡೆ ಜನಪ್ರಿಯರಾಗಿದ್ದಾರೆ.
ಓಶೋ ಆಧ್ಯಾತ್ಮಿಕತೆ ಎನ್ನುವುದು ಘನಗಂಭೀರವಾದ ಪ್ರಕ್ರಿಯೆ ಎಂಬ ಗ್ರಹಿಕೆಯನ್ನು ತಪ್ಪಿಸುವುದಕ್ಕಾಗಿಯೋ ಎಂಬಂತೆ ಕಥೆಗಳು, ನಗೆಹನಿಗಳ ಮೂಲಕವೂ ಗಹನವಾದ ತತ್ತ್ವಗಳನ್ನು ನಿರೂಪಿಸಿರುವುದು ಅವರ ಇನ್ನೊಂದು ಹೆಗ್ಗಳಿಕೆ.
ಮಹಾನ್ ಋಷಿಮುನಿಗಳು ತೋರಿದ ಹಾದಿ, ಧಾರ್ಮಿಕ ಗ್ರಂಥಗಳ ವಿಶ್ಲೇಷಣೆಗಳನ್ನು ಅವರು ಸುಮಾರು 30ಕ್ಕೂ ವರ್ಷಗಳ ಕಾಲ ನೀಡಿದರು. 1931ರ ಡಿಸೆಂಬರ್ 11ರಂದು ಪುಣೆಯಲ್ಲಿ ಜನಿಸಿದ ಚಂದ್ರ ಮೋಹನ್ ಜೈನ್ ಬದುಕಿದ್ದು 60 ವರ್ಷಗಳು ಮಾತ್ರ. ಆದರೆ ಈ ಅವಧಿಯಲ್ಲಿ ಪ್ರಪಂಚದ ಎಲ್ಲೆಡೆ ಶಿಷ್ಯರನ್ನು ಸಂಪಾದಿಸಿದ್ದರು. ಪುಣೆಯಲ್ಲಿಯೇ ಅತಿ ದೊಡ್ಡ ಧ್ಯಾನ ಕೇಂದ್ರವನ್ನು ತೆರೆದರು.
ಭಗವಾನ್ ರಜನೀಶ್ ಎಷ್ಟು ದೊಡ್ಡ ಹೆಸರು ಗಳಿಸಿದ್ದರೋ ಅಷ್ಟೇ ಪ್ರಮಾಣದಲ್ಲಿ ಆಸ್ತಿಯನ್ನೂ ಗಳಿಸಿದ್ದರು ಎನ್ನಲಾಗುತ್ತದೆ. ಆಸ್ತಿಪಾಸ್ತಿಯೂ ಅವರ ನಿಧನದ ಬಳಿಕ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು. ರಜನೀಶ್ ಅವರು ಬದುಕಿನ ಉತ್ತುಂಗ ಕಾಲದಲ್ಲಿದ್ದಾಗ ಸಾಕಷ್ಟು ವಿಲಾಸಿ ಜೀವನವು ಅದರೊಂದಿಗೆ ಥಳುಕು ಹಾಕಿಕೊಂಡಿತ್ತು. ರೋಲ್ಸ್ರಾಯ್ಸ್ ಕಾರುಗಳೆಂದರೆ ಬಹಳ ಪ್ರೀತಿ. ಅವರ ಬಳಿ 80ಕ್ಕೂ ಹೆಚ್ಚು ವಿಲಾಸಿ ಕಾರುಗಳಿದ್ದವು ಎನ್ನುತ್ತವೆ ಮೂಲಗಳು. ಅವರಿಗೆ ಇಂತಹ ಉಡುಗೊರೆಗಳನ್ನು ನೀಡಲು ಗಣ್ಯರು ಸಾಲುಗಟ್ಟುತ್ತಿದ್ದರು.
1980ರ ದಶಕದಲ್ಲಿ ಅವರ ಮೇಲೆ ಅನೇಕ ಆರೋಪಗಳು ಕೇಳಿಬಂದವು. ಅವರನ್ನು ವಿದೇಶದಿಂದ ಗಡಿಪಾರು ಮಾಡಲಾಯಿತು. ಅವರು ಉಪನ್ಯಾಸ ನೀಡುತ್ತಿದ್ದ ಹಲವು ದೇಶಗಳಿಗೆ ಅವರ ಪ್ರವೇಶವನ್ನು ನಿರ್ಬಂಧಿಸಲಾಯಿತು. ಓಶೋ ಅವರು ಪುಣೆಗೆ ಮರಳಿ ಮತ್ತೆ ತಮ್ಮ ಕಾರ್ಯಕ್ರಮ ಮುಂದುವರಿಸಿದರು.
ಓಶೋ ಅವರ ಪತಂಜಲಿ ಯೋಗಸೂತ್ರ, ಶಂಕರಾಚಾರ್ಯರ ಭಜ ಗೋವಿಂದಂ ಮೂಢಮತೆ, ಸಂಭೋಗದಿಂದ ಸಮಾಧಿಯ ಕಡೆಗೆ, ಬುದ್ಧನ Diamond Sutra, ಯೋಗ ಮತ್ತು Insights for a New Way of Living ಮಾಲಿಕೆಯಲ್ಲಿನ Intelligence, Creativity, Awareness, Courage ಓಶೋ ಶಿಷ್ಯಂದಿರು ಮತ್ತು ಸಾಧಕರಿಗೆ ವಿಷಯಗಳ ಕುರಿತ ನೀಡಿದ ಪ್ರವಚನಗಳು 650ಕ್ಕೂ ಹೆಚ್ಚು ಪುಸ್ತಕಗಳ ರೂಪದಲ್ಲಿ ಮುದ್ರಿತಗೊಂಡಿವೆ ಮತ್ತು ಮೂವತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಭಾಷಾಂತರ ಮಾಡಲ್ಪಟ್ಟಿವೆ. ಅವರ ಪ್ರವಚನಗಳು, ಧ್ವನಿಮುದ್ರಿಕೆಗಳ ಜಗತ್ತಿನಾದ್ಯಂತದ ಅಪಾರ ಮನ್ನಣೆ ಗಳಿಸಿವೆ.
ಓಶೋ ಹೇಳುತ್ತಾರೆ, ನನ್ನ ಸಂದೇಶಗಳು ಯಾವುದೇ ಸಿದ್ಧಾಂತ ಅಥವಾ ಚಿಂತನೆಯನ್ನು ಕುರಿತಾದದ್ದಲ್ಲ. ನನ್ನ ಸಂದೇಶಗಳು ರೂಪಾಂತರಣೆಗಾಗಿನ ರಾಸಾಯನಿಕ ಕ್ರಿಯೆಯಾಗಿದ್ದು ವಿಜ್ಞಾನವೇ ಆಗಿದೆ?
ಜನವರಿ 19, 1990ರಂದು ಓಶೋ ಅವರು ಕಮ್ಯೂನ್ ಇಂಟರ್ ನ್ಯಾಷನಲ್ ನಲ್ಲಿ ದೇಹತ್ಯಾಗ ಮಾಡಿದರು.
ಓಶೋರವರ ಸಮಾಧಿಯ ಮೇಲೆ ಸ್ವರ್ಣಕ್ಷರಗಳಲ್ಲಿ ಹೀಗೆ ಬರೆಯಲಾಗಿದೆ:
OSHO
Never Born
Never Died
Only Visited This
Planet Earth Between
Dec 11 1931- Jan 19 1990
ಇಂದಿನ ದಿನ ಮಾನಗಳಲ್ಲಿ ಅಧ್ಯಾತ್ಮದ ಹೆಸರಿನಲ್ಲಿ ಹಣ, ಅಧಿಕಾರ, ಪ್ರತಿಷ್ಠೆ, ಪ್ರಭಾವಗಳನ್ನು ಸಂಪಾದಿಸಿಕೊಳ್ಳುವ ಉದ್ದೇಶವುಳ್ಳ ಕಾಪೆರ್Çರೇಟ್ ಗುರುಗಳು ಜನರ ಸಾಮಾನ್ಯ ನಂಬಿಕೆಗಳೊಂದಿಗೆ ಹಾಗೂ ಪ್ರಭುತ್ವದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವರ ಮಧ್ಯೆ ಓಶೋ ವಿಭಿನ್ನವಾಗಿ ನಿಲ್ಲುತ್ತಾರೆ.