ರಾಮನಗರ:ಜನರ ಆರೋಗ್ಯದ ದೃಷ್ಟಿಯಿಂದ ನಾವು ಕೈಗೊಂಡಿದ್ದ ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಕಟಿಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ 11ದಿನಗಳ ಪಾದಯಾತ್ರೆ ಹಮ್ಮಿಕೊಂಡಿದ್ದೆವು. ಅದರಲ್ಲಿ ನಾಲ್ಕು ದಿನದ ಯಾತ್ರೆಗೆ ಭೂತಪೂರ್ವ ಯಶಸ್ಸು ಸಿಕ್ಕಿದೆ ಎಂದು ಹೇಳಿದರು.
ಐದನೆ ದಿನದ ಪಾದಯಾತ್ರೆಯನ್ನು ರಾಮನಗರದಿಂದ ಪ್ರಾರಂಭಿಸಬೇಕಿತ್ತು,ಕರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ,ನಮ್ಮ ಪಾದಯಾತ್ರೆಯಿಂದ ಸೋಂಕು ಹೆಚ್ಚಾಯಿತು ಎಂಬ ಭಾವನೆ ಜನರ ಮನಸ್ಸಿನಲ್ಲಿ ಬರಬಾರದು, ನಮಗೆ ರಾಜ್ಯದ ಜನರ ಬಗ್ಗೆ ಅತೀವ ಕಾಳಜಿ ಇದೆ ಹಾಗಾಗಿ ತಾತ್ಕಾಲಿಕವಾಗಿ ಪಾದಯಾತ್ರೆಯನ್ನು ಮೊಟಕುಗೊಳಿಸಿದ್ದೇವೆ ಎಂದು ತಿಳಿಸಿದರು.
ಕೊರೊನಾ ಸೋಂಕು ಕಡಿಮೆಯಾದ ಮೇಲೆ ಮತ್ತೆ ರಾಮನಗರದಿಂದಲೇ ಪಾದಯಾತ್ರೆಯನ್ನು ಮುಂದುವರಿಸುತ್ತೇವೆ ಎಂದು ಸಿದ್ದು ಹೇಳಿದರು.
ನಮ್ಮ ಪಕ್ಷದ ಹಿರಿಯರ ಜತೆ ಚರ್ಚಿಸಿ ನಾವೆಲ್ಲ ಒಟ್ಟು ಸೇರಿ ಪಾದಯಾತ್ರೆ ಸ್ಥಗಿತ ಗೊಳಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
ಸಂಗಮದಿಂದ ರಾಮನಗರದ ವರೆಗೆ ಒಟ್ಟು ನಾಲ್ಕು ದಿನ ಪಾದಯಾತ್ರೆ ಆಗಿದೆ. ಎಲ್ಲೆಡೆ ನಮಗೆ ಕಾರ್ಯಕರ್ತರು ಉತ್ಸಾಹ ತುಂಬಿದ್ದಾರೆ ಎಂದು ಹೇಳಿದರು.
ಎರಡು ತಿಂಗಳ ಹಿಂದೆಯೇ ನಮ್ಮ ಪಾದಯಾತ್ರೆಯನ್ನು ಘೋಷಿಸಿದ್ದೆವು ಆಗ ಯಾರೂ ಏನೂ ಹೇಳಲಿಲ್ಲ, ಪಾದಯಾತ್ರೆ ಪ್ರಾರಂಭವಾದ ಮೇಲೆ ಪದೇ ಪದೆ ನೋಟಿಸ್ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ನಿಷ್ಪಕ್ಷವಾಗಿ ವರ್ತಿಸಿಲ್ಲ ನಮ್ಮ ಪಾದಯಾತ್ರೆಯನ್ನು ತಡೆಯಬೇಕೆಂಬುದೇ ಅವರ ದುರುದ್ದೇಶವಾಗಿದೆ ಎಂದು ವಾಗ್ದಾಳಿ ನಡೆಸಿದರು.
ರಾಜದಲ್ಲಿ ಕೊರೊನ ಹೆಚ್ಚಾಗಲು ಕಾಂಗ್ರೆಸ್ ಪಕ್ಷ ಕಾರಣವಲ್ಲ ಬಿಜೆಪಿಯವರೇ ಕಾರಣ ಎಂದು ಗುಡುಗಿದರು.
ಜನವರಿ 6 ನೇ ತಾರೀಕು ವಿಧಾನಪರಿಷತ್ ಸದಸ್ಯರ ಪ್ರಮಾಣವಚನ ಸ್ವೀಕಾರ ಸಮಾರಂಭವನ್ನು ಮುಖ್ಯಮಂತ್ರಿಯವರು ಏರ್ಪಡಿಸಿದ್ದರು ಅಂದು ಐದು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
ಶಾಸಕ ರೇಣುಕಾಚಾರ್ಯ ಜಾತ್ರೆ ಆಯೋಜಿಸಿದ್ದರು ಅದರಲ್ಲೂ ನೂರಾರು ಮಂದಿ ಪಾಲ್ಗೊಂಡಿದ್ದರು. ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲಿ ಜಾತ್ರೆ ಇತ್ತು,ಅದೂ ಅಲ್ಲದೆ ಕೇಂದ್ರ ಸಚಿವರು ಜನಾಶೀರ್ವಾದ ಕಾರ್ಯಕ್ರಮವನ್ನು ಮಾಡಿದರು. ಅದರಲ್ಲೂ ಸಾವಿರಾರು ಜನರು ಭಾಗವಹಿಸಿದ್ದರು.
ಆಗೆಲ್ಲ ಕೊರೊನ ಮೂರನೆ ಅಲೆ ಇರಲಿಲ್ಲವೇ ಎಂದು ಸಿದ್ದರಾಮಯ್ಯ ಖಾರವಾಗಿ ಪ್ರಶ್ನಿಸಿದರು.
ಆದರೆ ನಮ್ಮ ಪಾದಯಾತ್ರೆಯಿಂದ ಸೋಂಕು ಹೆಚ್ಚಾಗುತ್ತಿದೆ ಎಂದು ಹೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಬಿಜೆಪಿಯವರೇ ಮಾಡಿದ ಯಾವುದೇ ಕಾರ್ಯಕ್ರಮಗಳಿಗೂ ಸರ್ಕಾರ ನೋಟಿಸ್ ನೀಡಿಲ್ಲವೇಕೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಜನರಿಗಾಗಿ ನಾವು ಪಾದಯಾತ್ರೆ ಸಧ್ಯಕ್ಕೆ ನಿಲ್ಲಿಸಿದ್ದೇವೆ,ಕೋವಿಡ್ – 19 ಕಡಿಮೆಯಾಗಲಿ ಆನಂತರ ಮತ್ತೆ ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.