ಪಶುಸಂಗೋಪನ ಸಚಿವರ ಉಸ್ತುವಾರಿ ಜಿಲ್ಲೆಯಲ್ಲೇ ವೈರಸ್ ಗೆ 30ಕ್ಕೂ ಹೆಚ್ಚು ಕುರಿಗಳು ಬಲಿ

ಚಾಮರಾಜನಗರ: ಪಶುಸಂಗೋಪನ ಸಚಿವ ವೆಂಕಟೇಶ್ ಅವರ ಉಸ್ತುವಾರಿ ಜಿಲ್ಲೆಯಲ್ಲೇ  ವೈರಸ್ ತಗುಲಿ ೩೦ ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವುದು ವಿಪರ್ಯಾಸವಾಗಿದೆ.

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೋಕಿನ ಚೌಡಹಳ್ಳಿ ಗ್ರಾಮದಲ್ಲಿ  ಮೇಕೆಗಳಿಗೆ ಪಿಪಿಆರ್ ಎಂಬ ಸಾಂಕ್ರಾಮಿಕ ರೋಗ ತಗುಲಿ ಅಸುನೀಗುತ್ತಿವೆ, ಹಾಗಾಗಿ ರೈತರು ಏನೂ ಮಾಡಲು ತೋಚದೆ ದಿಕ್ಕೆಟ್ಟಿದ್ದಾರೆ.

ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಸಂತೆಯಿಂದ ಖರೀದಿಸಿ ತಂದ ಮೇಕೆ ಮರಿಯಿಂದ ಈ ವೈರಸ್ ಹರಡಿದ್ದು ಕಳೆದ 15 ದಿನಗಳಿಂದ 30 ಕ್ಕೂ ಹೆಚ್ಚು ಕುರಿ, ಮೇಕೆಗಳನ್ನು ರೈತರು ಕಳೆದುಕೊಂಡಿದ್ದಾರೆ.

ಮೇಕೆ ಸಾಕಾಣಿಕೆದಾರರು ಸತ್ತ ಮೇಕೆಗಳನ್ನು ಕಸದ ತಿಪ್ಪೆಗೆ ಎಸೆಯುತ್ತಿರುವುದರಿಂದ ಮತ್ತಷ್ಟು ಕುರಿಗಳಿಗೆ ಈ ವೈರಸ್ ಹರಡಿರಬಹುದು ಎಂದು ಹೇಳಲಾಗುತ್ತದೆ.

ಕಾಯಿಲೆ ನಿಯಂತ್ರಣಕ್ಕೆ ಪಶು ಇಲಾಖೆ ತ್ವರಿತ ಕ್ರಮ ಕೈಗೊಳ್ಳಬೇಕಿದೆ.

ಶಿವಪುರ ವಲಯದ ಪಶು ಚಿಕಿತ್ಸಕರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕಾಯಿಲೆ ತಡೆಗೆ ಅವರ ಸಲಹೆಯಂತೆ ರೈತರೇ ಮೈಸೂರಿನಿಂದ ಲಸಿಕೆ ಖರೀದಿಸಿ ತಂದಿದ್ದಾರೆ.

ಆದರೆ ಲಸಿಕೆ ನೀಡಿದ ನಂತರವೂ ಕಾಯಿಲೆ ನಿಯಂತ್ರಣ ಸಾಧ್ಯವಾಗಿಲ್ಲ ಎಂದು ಸಾಕಾಣಿಕೆದಾರರು ಆಕ್ರೋಶ ವ್ಯಕ್ತಪಡಿಸಿದರು

ಜಿಲ್ಲಾ ಉಸ್ತುವಾರಿ ಸಚಿವರೇ ಪಶುಸಂಗೋಪನಾ ಇಲಾಖೆ ಸಚಿವರಾಗಿದ್ದಾರೆ.

ಇವರ ಜೊತೆಗೆ ಕ್ಷೇತ್ರದ ಶಾಸಕರು ಕಾಯಿಲೆ ಬಗ್ಗೆ ಮಾಹಿತಿ ಪಡೆದು ಸಚಿವರ ಗಮನಕ್ಕೆ ತಂದು ರೋಗ ತಡೆಗೆ ಕ್ರಮ ವಹಿಸಿ, ಮೇಕೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮದ ಮುಖಂಡರು ಒತ್ತಾಯಿಸಿದರು.

ಗ್ರಾಮಸ್ಥರ ಒತ್ತಾಯಕ್ಕೆ ಪಶು ಸಂಗೋಪನೆ ಇಲಾಖೆ ಸ್ಪಂದಿಸಿದೆ.

ಸಣ್ಣ ಮರಿಗಳು ವೈರಸ್ ಸೋಂಕಿನಿಂದ ಮೃತ ಪಟ್ಟಾಗ ಮರಿಗಳನ್ನು ಹೂಳದೆ ಬೀಸಾಡಿದ್ದಾರೆ. ಆದ್ದರಿಂದ ಸೋಂಕು ಉಲ್ಬಣಗೊಂಡು ಹರಡಿದೆ.

ಗ್ರಾಮದಲ್ಲಿ ಎಲ್ಲಾ ಮರಿಗಳಿಗೂ ವ್ಯಾಕ್ಸಿನೇಷನ್‌ ಮಾಡಲಾಗಿದೆ ಇನ್ನೂ ಮರಿಗಳ ಸಾವು ನಿಯಂತ್ರಣವಾಗಿಲ್ಲ.

ಸೋಂಕು ನಿಯಂತ್ರಣಕ್ಕೆ ಬರಲು 21 ದಿನಗಳು ಬೇಕಾಗುತ್ತದೆ, ಮೃತಪಟ್ಟ ಎಲ್ಲಾ ಮೇಕೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಮೋಹನ್ ಕುಮಾರ್ ಭರವಸೆ ನೀಡಿದ್ದಾರೆ.