ಪೂರ್ವಜರ ಸ್ಮರಣೆಗೆ ಒಂದು ದಿನ: ಅದೇ ಪಿತೃ ಪಕ್ಷ

ಹಿಂದುಗಳ ಪ್ರತಿ ಪೂಜೆ, ಮತ್ತಿತರ ವಿಧಿವಿಧಾನಗಳಿಗೂ ಒಂದೊಂದು ಅರ್ಥವಿದೆ. ಅದಕ್ಕಾಗಿಯೇ ಒಂದೊಂದು ದಿನ ಇದೆ.
ಅದರಂತೆ ನಮ್ಮ ಪೂರ್ವಿಕರಾದಿಯಾಗಿ ಮಾತಾಪಿತರನ್ನು ಆರಾಧಿಸಲು ಇರುವ ಪಿತೃಪಕ್ಷದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಈ ಬಾರಿ ಸೆಪ್ಟೆಂಬರ್ 3ರಿಂದ ಆರಂಭವಾಗಿರುವ ಪಿತೃ ಪಕ್ಷ 15 ದಿನಗಳ ತರುವಾಯ ಅಂದರೆ ಸೆಪ್ಟೆಂಬರ್ 17ರಂದು ಪೂರ್ಣಗೊಳ್ಳಲಿದೆ.
ಅಲ್ಲಿಯ ವರೆಗೂ ಪಿತೃಪಕ್ಷವನ್ನು ಆಚರಿಸ ಬಹುದು. ಆದರೆ ಈ ಪಕ್ಷದ ಮಹತ್ವ, ಅದು ಶುಭವೊ… ಅಶುಭವೋ ಎಂಬೆಲ್ಲಾ ವಿಷಯ ತಿಳಿಯೋಣ ಬನ್ನಿ.
ಪಿತೃಪಕ್ಷದ ಮಹತ್ವವೇನು? : ಪಿತೃದೇವತೆಗಳ ಋಣಸಂದಾಯ ಮೂಲಕ ಕರ್ತವ್ಯ ಪಾಲನೆಗೆ ಭಾದ್ರಪದ ಬಹುಳ ಪಾಡ್ಯದಿಂದ ಅಮಾವಾಸ್ಯೆವರೆಗೆ ಬರುವ ಮಹಾಲಯ – ಈ 15 ದಿನಗಳು ಪಿತೃಪಕ್ಷವೆನಿಸಿದೆ.
ಪ್ರತಿ ವೈದಿಕ ಕ್ರಿಯೆಯಲ್ಲೂ ಗತಿಸಿದ ಪಿತೃಗಳನ್ನು ಸ್ಮರಿಸಿ ‘ಪಿತೃದೇವತಾಂ ನಮಸ್ಕøತ್ಯ’ ಎಂದು ಅನುಗ್ರಹ ಪಡೆದು ವೈದಿಕ ಕ್ರಿಯೆ ಮುಂದುವರಿಸುವುದು ಸಂಪ್ರದಾಯ.
ಅದರಂತೆ ಮಹಾಲಯ ಅಮಾವಾಸ್ಯೆ ಶ್ರಾದ್ಧ ವಿಧಿಗಳಿಗೆ ಪ್ರಾಶಸ್ತ್ಯವಾಗಿದೆ.
ಯಾರು ಮಾತಾ-ಪಿತೃಗಳ ಶ್ರಾದ್ಧ ಮಾಡುವುದಿಲ್ಲವೋ ಅತ ಮಾಡುವ ದೇವತಾ ಕಾರ್ಯಗಳು, ಪೂಜೆ-ಪುನಸ್ಕಾರಗಳನ್ನು ದೇವತೆಗಳು ಸ್ವೀಕರಿಸುವುದಿಲ್ಲವೆಂಬ ನಂಬಿಕೆ ಬೇರೂರಿದೆ.
ಪಿತೃಪಕ್ಷ ಅಶುಭವಲ್ಲ: ಪಿತೃಪಕ್ಷದಲ್ಲಿ ಯಾವುದೇ ದೇವತಾ ಕಾರ್ಯಗಳನ್ನಾಗಲಿ, ಮಂಗಳ ಕಾರ್ಯಗಳನ್ನಾಗಲಿ ಮಾಡುವುದು ಶ್ರೇಯಸ್ಕರ ಅಲ್ಲವೆಂಬ ಅಭಿಪ್ರಾಯವಿದೆ.
ಗತಿಸಿದ ಕುಟುಂಬದ ಹಿರಿಯರು, ಮಾತಾ -ಪಿತರೆಂಬ ದಿವ್ಯಾತ್ಮಗಳನ್ನು ತೃಪ್ತಿಪಡಿಸಿ, ನಮ್ಮನ್ನು ಭೂಮಿಗೆ ತಂದು ಅಗಲಿದ ಚೈತನ್ಯಗಳಿಂದ ಅನುಗ್ರಹ ಪಡೆಯುವ ಪ್ರಶಸ್ತ ಕಾಲವೇ ಪಿತೃಪಕ್ಷ. ಹಾಗಾಗಿಯೇ ಈ ಕಾರ್ಯಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಲಾಗಿದೆ. ಪಿತೃ ಶ್ರಾದ್ಧದಲ್ಲಿ ಕಾಗೆಗಳಿಗೆ ಅನ್ನ ನೀಡುತ್ತಾರೆ.
ಯಮ ಕಾಗೆಗಳಿಗೆ ದೀರ್ಘಾಯುಷ್ಯವನ್ನು ಕೊಟ್ಟು, ‘ನನ್ನ ಲೋಕದಲ್ಲಿ ಇರುವ ಪಿತೃಗಳು ನಿನ್ನ ಮೂಲಕ ಉಂಡು ತೃಪ್ತರಾಗಲಿ’ ಎಂದು ವರ ನೀಡಿದ.
ಈ ವಿಷಯ ರಾಮಾಯಣದಲ್ಲಿ ಬರುತ್ತದೆ. ಅದು ರಾವಣನ ಕಾಲ. ಅವನಿಗೆ ಹೆದರಿ ಎಲ್ಲಾ ದೇವತೆಗಳು ಒಂದು ಯಜ್ಞಕ್ಕೆ ಗೌಪ್ಯವಾಗಿ ಪಕ್ಷಿಗಳ ರೂಪದಿಂದ ಬಂದರು. ಆ ಯಜ್ಞ ಸೂರ್ಯ ವಂಶದಲ್ಲಿ ಬಂದ ಮರುತ್ ಎಂಬ ರಾಜ ಮಾಡುತ್ತಿದ್ದ. ದೇವೇಂದ್ರ ನವಿಲಾದ. ಬ್ರಹ್ಮದೇವರು ಹಂಸನಾದ. ಯಮ ಕಾಗೆಯಾದ. ಕೊನೆಯಲ್ಲಿ ತಮ್ಮ ಗೌಪ್ಯವನ್ನು ಕಾಪಾಡಿದ ಆ ಪಕ್ಷಿಗಳಿಗೆ ವರವನ್ನು ಕೊಟ್ಟರು.