ಪಾಕಿಸ್ತಾನ್ ಜಿಂದಾಬಾದ್ ಘೋಷಣೆ : ತನಿಖೆಗೆ ಮೂರು ವಿಶೇಷ ತಂಡ-ಪರಮೇಶ್ವರ್

ಬೆಂಗಳೂರು: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಆರೋಪ ಕುರಿತು
ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.

ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ವಿಧಾನಸೌಧದ ಆವರಣದಲ್ಲಿ ಡಾ ಸೈಯದ್ ನಾಸಿರ್ ಹುಸೇನ್ ಅಭಿಮಾನಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುವುದು ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪರಮೇಶ್ವರ್,ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ವಿಡಿಯೋದಲ್ಲಿ ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ವೈಜ್ಞಾನಿಕವಾಗಿ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋ ಕಳುಹಿಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಒಂದು ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ಆಗೇ ಆಗುತ್ತೆ, ಮಾಧ್ಯಮಗಳಲ್ಲಿ ಯಾರು ಮೊದಲು ಪ್ರಸಾರ ಮಾಡಿದ್ದಾರೆ ಅವರಿಂದ ವಿಡಿಯೋ ಪಡೆದು ತನಿಖೆ ಮಾಡುತ್ತೇವೆ, ಪೊಲೀಸರು ಮಾಡಿರುವ ವಿಡಿಯೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮರಾ ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಬಿಜೆಪಿಯವರು ಕೊಟ್ಟಿರುವ ದೂರನ್ನು ಕೂಡ ಸ್ವೀಕರಿಸಿದ್ದೇವೆ. ಸದನದ ಒಳಗೆ ಹೊರಗೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತಿದ್ದಾರೆ, ಮಾಡಲಿ. ನಾವು ತಪ್ಪು ಅಂತ ಹೇಳಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಲಿ ಎಂದು ತಿಳಿಸಿದರು.