ಶಿವಮೊಗ್ಗ:ನಿರಂತರ ಒತ್ತಡಯುಕ್ತ ಕುಡಿಯುವ ನೀರು ಯೋಜನೆ ಮತ್ತು 24*7 ಕುಡಿಯುವ ನೀರು ಯೋಜನೆಗಳಿಂದಾಗಿ ಮುಂದಿನ ವರ್ಷದೊಳಗೆ ಶಿವಮೊಗ್ಗ ಹಾಗೂ ಹೊರಭಾಗದ ಪ್ರದೇಶಗಳಲ್ಲಿ ಪ್ರತಿ ಮನೆಗಳಿಗೂ ನಿರಂತರವಾಗಿ ಕುಡಿಯುವ ನೀರು ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ,ಶಿವಮೊಗ್ಗ ಮಹಾನಗರಪಾಲಿಕೆ ಸಂಯುಕ್ತಾಶ್ರಯದಲ್ಲಿ ಪಾಲಿಕೆ ವ್ಯಾಪ್ತಿಯ ಹೊರವಲಯದ ಪ್ರದೇಶಗಳಿಗೆ ನಿರಂತರ ಒತ್ತಡಯುಕ್ತ ಕುಡಿಯುವ ನೀರು ಸರಬರಾಜು ವಿತರಣಾ ವ್ಯವಸ್ಥೆಯನ್ನು ಕಲ್ಪಿಸುವ ರೂ. 96.50 ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಕಂಟ್ರಾಕ್ಟರ್ ಗಳಿಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇನ್ನೊಂದು ವರ್ಷದಲ್ಲಿ ಎರಡೂ ಕಾಮಗಾರಿಗಳು ಪೂರ್ಣಗೊಂಡು ನಗರದ ಎಲ್ಲ ಮನೆಗಳಿಗೆ ಕುಡಿಯುವ ನೀರು ಲಭಿಸಲಿದೆ ಎಂದು ಭರವಸೆ ನೀಡಿದರು.
ಇನ್ನು ಒಂದು ವರ್ಷದ ಒಳಗೆ 24*7 ಕುಡಿಯುವ ನೀರು ಮತ್ತು ನಗರ ಹೊರವಲಯಕ್ಕೆ ನೀರು ಕಲ್ಪಿಸುವ ಈ ಯೋಜನೆ ಪೂರ್ಣಗೊಳ್ಳಲೇಬೇಕು. ಈ ನಿಟ್ಟಿನಲ್ಲಿ ಕೆಲಸಗಳು ಚುರುಕಾಗಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ಈಶ್ವರಪ್ಪ ಸೂಚನೆ ನೀಡಿದರು.