ಬೆಂಗಳೂರು: ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಒತ್ತಾಯಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇದರಿಂದ ವಿದ್ಯಾರ್ಥಿನಿ ಹೇಮಶ್ರೀ ಸೇರಿದಂತೆ ಹಲವು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.ಈ ವೇಳೆ ತಳ್ಳಾಟ ನೂಕಾಟವಾಗಿದೆ.
ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೆವು ಆದರೆ ಏಕಾಏಕಿ ಪೊಲೀಸರು ಲಾಠಿ ಚಾರ್ಜ್ ಪ್ರಾರಂಭಿಸಿದರು. ಇದರಿಂದ ಇಪ್ಪತ್ತಕ್ಕು ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ,ಕೆಲವರಿಗೆ ಫ್ರ್ಯಾಕ್ಚರ್ ಆಗಿದೆ ಎಂದು ಗಾಯಗೊಂಡಿರುವ ಹೇಮಶ್ರೀ ಮಾಧ್ಯಮ ಪ್ರತಿ ನಿಧಿಗಳಿಗೆ ತಿಳಿಸಿದರು.
ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಎರಡು,ಮೂರು ವರ್ಷಗಳಿಂದ ಮಾರ್ಕ್ಸ್ ಕಾರ್ಡಗಳು ಸಿಕ್ಕಿಲ್ಲ,ಹಾಸ್ಟೆಲ್ ನಲ್ಲಿ ಮೂಲಭೂತ ಸೌಕರ್ಯ ಇಲ್ಲ, ನಮ್ಮ ಸಮಸ್ಯೆಗಳನ್ನು ಆಲಿಸುವವರು ಯಾರೂ ಇಲ್ಲ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸಿದರು.
ಲಾಠಿ ಚಾರ್ಜ್ ನಿಂದ ಬಿಗುವಿನ ವಾತಾವರಣ ನಿರ್ಮಾಣ ವಾಗಿದ್ದು ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.