ಚಾಮರಾಜನಗರ: ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮದಿಂದ ಉನ್ನತ ಸಾಧನೆ ಮಾಡಿ ಯಶಸ್ಸು ಪಡೆಯಲು ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.
ನಗರದ ಹೊರವಲಯದಲ್ಲಿ ರುವ ಚಾಮರಾಜನಗರ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮ ಕಾರ್ಯಕ್ರಮ ವನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ನಿಮ್ಮ ಮುಂದಿನ ಭವಿಷ್ಯ ನಿರ್ಧರಿಸಿಕೊಳ್ಳಬಲ್ಲವರಾಗಿದ್ದೀರಿ. ನೀವು ಏನಾಗಬೇಕೆಂದು ಬಯಸುವಿರೋ ಅದಕ್ಕೆ ಶೇ. 100ರಷ್ಟು ಪ್ರಾಮಾಣಿಕ ಪ್ರಯತ್ನ, ಶ್ರದ್ದೆ, ಪರಿಶ್ರಮ ಇರಲಿ. ಇದರಿಂದ ನೀವು ಅಂದುಕೊಂಡ ಉನ್ನತಿಯನ್ನು ಖಚಿತವಾಗಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳು ಸಂಚಾರಿ ನಿಯಮ ಕಡ್ಡಾಯವಾಗಿ ಪಾಲನೆ ಮಾಡಬೇಕು. ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿರಬೇಕು. ಕಾರು ಚಲಾಯಿಸುವಾಗ ಸೀಟ್ಬೆಲ್ಟ್ ಹಾಕಿಕೊಳ್ಳಬೇಕು. ಮಾದಕ ವಸ್ತುಗಳ ಸೇವನೆಯಿಂದ ದೂರವಿರಬೇಕು. ಮಾದಕ ವಸ್ತುಗಳ ಮಾರಾಟ ಕಂಡುಬಂದರೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು ಅವರು ತಿಳಿಸಿದರು.
ಹಾಸನ ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ. ತಾರನಾಥ್ ಮಾತನಾಡಿ ಜ್ಯೋತಿ ಜ್ಞಾನದ ಸಂಕೇತವಾಗಿದೆ. ಬೆಳಕು ಇರುವ ಕಡೆ ಕತ್ತಲೆಗೆ ಅವಕಾಶವಿರುವುದಿಲ್ಲ. ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಶಿಕ್ಷಣ ಬಹಳ ಮುಖ್ಯ ಎಂದರು.
ಚಾಮರಾಜನಗರ ವಿಶ್ವವಿದ್ಯಾನಿಲಯದ ಉಪ ಕುಲಪತಿ ಪ್ರೊ. ಎಂ.ಆರ್. ಗಂಗಾಧರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಮೌಲ್ಯಮಾಪನ ರಿಜಿಸ್ಟಾರ್ ಪ್ರೊ. ಪಿ. ಮಾದೇಶ್, ಪ್ರೊ. ಆರ್. ಮಹೇಶ್, ಪಿ.ಎಂ.ಇ.ಬಿ ನಿರ್ದೇಶಕರಾದ ಡಾ. ವಿ.ಜಿ. ಸಿದ್ದರಾಜು, ಸಂದರ್ಶಕ ಪ್ರಾಧ್ಯಾಪಕ ಪ್ರೊ. ಕೃಷ್ಣಮೂರ್ತಿ ಹನೂರು ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.