ಮೈಸೂರು: ವಿಧಾನ ಪರಿಷತ್ ನ ಸದಸ್ಯ ಹೆಚ್. ವಿಶ್ವನಾಥ್ ಅವರಿಗೆ ಪೂರ್ವಾಶ್ರಮದ ಪ್ರಭಾವ ಇನ್ನೂ ಇದ್ದಂತಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಶನಿವಾರ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಟಿಪ್ಪು ಈ ನೆಲದ ಮಣ್ಣಿನ ಮಗ ಎಂಬ ಹೇಳಿಕೆ ನೀಡಿದ್ದ ಹೆಚ್. ವಿಶ್ವನಾಥ್ ಹೇಳಿಕೆಗೆ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದರು.
ವಿಶ್ವನಾಥ್ ಅವರು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಆದರೆ ಅವರ ಪೂರ್ವಾಶ್ರಮ ಪ್ರಭಾವ ಇನ್ನೂ ಇದ್ದಂತಿದೆ ಎಂದರು. ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಜ್ಞಾನ ಹೊಂದಿದ್ದೇನೆ ಎನ್ನುವವರು ಕನಿಷ್ಠ ಜ್ಞಾನ ಇಟ್ಟುಕೊಂಡು ಮಾತಾನಾಡಬೇಕು ಎಂದು ಹೆಚ್.ವಿಶ್ವನಾಥ್ ಗೆ ಪ್ರತಾಪ್ ಸಿಂಹ ಮಾರ್ಮಿಕವಾಗಿ ಹೇಳಿದರು.
ಸಾಹಿತ್ಯ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ವಿಶ್ವನಾಥ್ ಕಾಲಿಟ್ಟಿದ್ದಾರೆ. ಮೈಸೂರಿನ ಇತಿಹಾಸವನ್ನು ಸರಿಯಾಗಿ ತಿಳಿದುಕೊಂಡು ಮಾತನಾಡಬೇಕು ಎಂದರು.
ಮೈಸೂರಿನ ಯದುವಂಶವನ್ನು ನಿರ್ನಾಮ ಮಾಡಲು ಹೊರಟವರು ಯಾರು.? ಕನ್ನಡ ಭಾಷೆಯ ಮೇಲೆ ಪ್ರಹಾರ ಮಾಡಿ ರೆವಿನ್ಯೂ ಡಿಪಾರ್ಟ್ ಮೆಂಟ್ ನಲ್ಲಿ ಖಾತೆ, ಬಗರ್ ಹುಕುಂ ಪದಗಳನ್ನ ತಂದಿದ್ದು ಯಾರು.? ಮೈಸೂರು ಸಾಮ್ರಾಜ್ಯವನ್ನ ಸುಭಿಕ್ಷಗೊಳಿಸಿದವರು. ಕನ್ನಂಬಾಡಿ ಕಟ್ಟೆ ಕಟ್ಟಿ ಜನರ ಹಿತ ಕಾಯ್ದವರು ಮೈಸೂರು ಅರಸರು. ಅಂತಹ ಮೈಸೂರು ರಾಜರನ್ನು ನಿರ್ನಾಮ ಮಾಡಲು ಹೊರಟವರು ಯಾರು..? ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.