ಪುಸ್ತಕಗಳೆಂಬ ಜ್ಞಾನದ ಬಾಗಿಲು

ಡಾ.ಗುರುಪ್ರಸಾದ ರಾವ್ ಹವಲ್ದಾರ್

ಲೇಖಕರು ಮತ್ತು ಉಪನ್ಯಾಸಕರು

dr.guruhs@gmail.com

ಓದುವಿಕೆಯ ಅಭಿರುಚಿ ಹೆಚ್ಚಿಸಲು, ಪ್ರಕಾಶನಕ್ಕೆ ಉತ್ತೇಜನ ನೀಡಲು ಹಾಗೂ ಕೃತಿಸ್ವಾಮ್ಯಗಳ ಸಂರಕ್ಷಣೆಗಾಗಿ ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಪುಸ್ತಕ ದಿನವನ್ನು ಆಚರಿಸಬೇಕೆಂಬ ಆಲೋಚನೆ Vicente Clavel Andres ಎಂಬ ಬರಹಗಾರನದ್ದು.

17ನೇ ಶತಮಾನದ ಪ್ರಖ್ಯಾತ ಸ್ಪೇನ್ ಬರಹಗಾರ Miguel de Cervantes ರನ್ನು ಗೌರವಿಸಬೇಕೆನ್ನುವ ಉದ್ದೇಶದಿಂದ ಅವರ ಜನ್ಮದಿನ(Oct-7) ಅಥವಾ ಮಡಿದ ದಿನ (Apr-23) ಅನ್ನು ಪುಸ್ತಕ ದಿನವನ್ನಾಗಿ ಆಚರಿಸಬೇಕೆಂದು ಸೂಚಿಸಿದ.

ಹಾಗಾಗಿ UNESCO ಎಪ್ರಿಲ್ 23 ಪ್ರಖ್ಯಾತ ನಾಟಕಗಾರ ವಿಲಿಯಂ ಶೇಕ್ಸ್‌ಪಿಯರ್ ಮರಣವನ್ನು ಹೊಂದಿದ ದಿನವಾದ ಕಾರಣ ಅಂದೇ ಪುಸ್ತಕ ದಿನಾಚರಣೆಯನ್ನು ಆಚರಿಸುವ ನಿರ್ಧಾರಕ್ಕೆ ಬಂತು. ಆ ಕಾರಣದಿಂದ UNESCO 1995 ಪುಸ್ತಕ ಮತ್ತು ಹಕ್ಕುಸ್ವಾಮ್ಯ ದಿನ ಆಚರಿಸಲು ನಿರ್ಧರಿಸಲಾಯಿತು. 

ಈ ಬಾರಿ ನಾವು 26ನೇ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ಆಚರಿಸುತ್ತಿದ್ದೇವೆ.

ಪುಸ್ತಕ ದಿನಾಚರಣೆ ಅಂಗವಾಗಿ ಪ್ರತಿವರ್ಷ ವಿಶ್ವದ ಒಂದು ನಗರವನ್ನು ವಿಶ್ವದ ಪುಸ್ತಕ ರಾಜಧಾನಿಯನ್ನಾಗಿ ಯುನೆಸ್ಕೊ ಘೋಷಿಸುತ್ತದೆ. ಈ ಬಾರಿ ಜಾರ್ಜಿಯ ದೇಶದ ಟಿಬಿಲಿಸಿ (Tbilisi) ರಾಜಧಾನಿ  ವಿಶ್ವದ ಪುಸ್ತಕ ರಾಜಧಾನಿ ಪಟ್ಟದ ಗೌರವ ಪಡೆದುಕೊಂಡಿದೆ.

ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನದ ಉದ್ದೇಶಗಳು ವಿಶ್ವ ಪುಸ್ತಕ ದಿನದಂದು ಪುಸ್ತಕ ಹಾಗೂ ಲೇಖಕ ಇಬ್ಬರಿಗೂ ಗೌರವ ಸಲ್ಲಿಸಲಾಗುತ್ತದೆ. ಜೊತೆಗೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಓದುವಿಕೆಯ ಮಾಧುರ್ಯವನ್ನು ತಿಳಿಸುವ ವಿವಿಧ ಚಟುವಟಿಕೆಗಳನ್ನು ಈ ದಿನದಂದು ಹಮ್ಮಿಕೊಳ್ಳಲಾಗುತ್ತದೆ.

ಯುನೆಸ್ಕೊ ನೀಡುವ ಸಹಿಷ್ಣುತೆಯ ಸೇವೆಯಲ್ಲಿ ಮಕ್ಕಳ ಮತ್ತು ಯುವಜನರ ಸಾಹಿತ್ಯ ಪುರಸ್ಕಾರವನ್ನು ಈ ದಿನದಂದು ಪ್ರಕಟಿಸಲಾಗುತ್ತದೆ.

1995ರಲ್ಲಿ ಪ್ಯಾರಿಸ್​ನಲ್ಲಿ ನಡೆದ ಯುನೆಸ್ಕೊ ಸಾಮಾನ್ಯ ಸಭೆಯಲ್ಲಿ ಏ. 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನು ಆಚರಿಸಲು ಘೋಷಿಸಿತು.

ಕೃತಿಸ್ವಾಮ್ಯ ಎಂದರೇನು?ಲೇಖಕ ಅಥವಾ ಬರಹಗಾರರಿಗೆ ಅವರು ರಚಿಸಿದ ಬರಹ ಅಥವಾ ಇನ್ನಾವುದೇ ಮಾಹಿತಿಯ ಮೇಲೆ ಕಾನೂನಾತ್ಮಕ ಹಕ್ಕು ನೀಡುವುದೇ ಕೃತಿಸ್ವಾಮ್ಯವಾಗಿದೆ.

ತನ್ನ ಕೃತಿಯನ್ನು ಪ್ರಕಟಿಸಲು ಅಥವಾ ನಕಲು ಮಾಡಲು ಮತ್ತೊಬ್ಬರಿಗೆ ಅಧಿಕಾರ ನೀಡಲು ಈ ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಅಂದರೆ ಮೂಲತಃ ಇದು ಬೌದ್ಧಿಕ ಆಸ್ತಿ ಹಕ್ಕಾಗಿದೆ.

ಪುಸ್ತಕ ಹಾಗೂ ಕೃತಿಸ್ವಾಮ್ಯಗಳ ರಕ್ಷಣೆಯಲ್ಲಿ ಮಹತ್ತರ ಕಾರ್ಯ ಮಾಡುತ್ತಿರುವ ಯುನೆಸ್ಕೊ ಕ್ರಿಯಾಶೀಲತೆ, ಸೃಜನಶೀಲತೆ ಮತ್ತು ವೈವಿಧ್ಯತೆಗಳಿಗೆ ಒತ್ತು ನೀಡುತ್ತಿದೆ. ಹಾಗೆಯೇ ಎಲ್ಲರಿಗೂ ಜ್ಞಾನದ ಸಮಾನ ಹಂಚಿಕೆಯಾಗುವಂತೆ ಶ್ರಮಿಸುತ್ತಿದೆ.

ಸೃಜನಾತ್ಮಕ ನಗರಗಳ ಜಾಲ ನಿರ್ಮಾಣ, ಸಾಕ್ಷರತೆಯ ಉತ್ತೇಜನ, ಮೊಬೈಲ್ ಮೂಲಕ ಕಲಿಕೆ ಮತ್ತು ವೈಜ್ಞಾನಿಕ ಹಾಗೂ ಶೈಕ್ಷಣಿಕ ಜ್ಞಾನ ಸಂಪನ್ಮೂಲಗಳು ಮುಕ್ತವಾಗಿ ಲಭ್ಯವಾಗುವಂತೆ ಮಾಡುವಲ್ಲಿ ಯುನೆಸ್ಕೊ ಪ್ರಮುಖ ಪಾತ್ರ ವಹಿಸಿದೆ.

ಸಾಹಿತ್ಯ ಕ್ಷೇತ್ರದ ಪ್ರಮುಖ ಪಾಲುದಾರರಾಗಿರುವ ಲೇಖಕ, ಪ್ರಕಾಶಕ, ಶಿಕ್ಷಕ, ಲೈಬ್ರರಿಯನ್, ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳು, ಮಾನವ ಹಕ್ಕು ಸ್ವಯಂ ಸೇವಾ ಸಂಸ್ಥೆಗಳು, ಸಮೂಹ ಮಾಧ್ಯಮ ಹೀಗೆ ಸಮಾನ ಮನಸ್ಕ ಎಲ್ಲರನ್ನೂ ಒಂದೇ ಜಾಗತಿಕ ವೇದಿಕೆಯಡಿ ತರುವುದು.

ಕಳೆದ ವರ್ಷ ಕೋವಿಡ್​-19 ವಿರುದ್ಧ ಇಡೀ ಜಗತ್ತು ಹೋರಾಡುತ್ತಿರುವ ಸಮಯದಲ್ಲಿ, ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಶಾಲೆ-ಕಾಲೇಜುಗಳು ಸ್ಥಗಿತಗೊಂಡಂತಹ ಸಂದರ್ಭದಲ್ಲಿ ಇ-ಬುಕ್​ ಹಾಗೂ ಇ-ಲರ್ನಿಂಗ್​ನತ್ತ ವಿದ್ಯಾರ್ಥಿಗಳು ಗಮನಹರಿಸಿದರು. ಸಂಶೋಧಕರು ಸಹ ತಮ್ಮ ಜರ್ನಲ್​ಗಳನ್ನು ಆನ್ಲೈನ್​ ಮೂಲಕ ಪ್ರಕಟಿಸುತ್ತಿದ್ದಾರೆ. ಡಿಜಿಟಲ್​ ಲೈಬ್ರರಿಗಳು ಹಾಗೂ ಪ್ರಕಾಶಕರು ಸಹ ಆದಷ್ಟೂ ಹೆಚ್ಚು ಮಾಹಿತಿಯನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತಿದ್ದಾರೆ. ವಿಶ್ವಾಸಾರ್ಹ ಆನ್ಲೈನ್​ ಮಾಹಿತಿಗೆ ಇನ್ನಿಲ್ಲದ ಬೇಡಿಕೆ ಬಂದಿದ್ದು, ಉತ್ತಮ ಗುಣಮಟ್ಟದ ಇ-ಬುಕ್ಸ್​, ಜರ್ನಲ್​ಗಳು ಹಾಗೂ ಶೈಕ್ಷಣಿಕ ಪಠ್ಯದ ಪ್ರಕಟಣೆಗೆ ನಾಂದಿ ಹಾಡಿದೆ.

ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ (NDLI)ಐಐಟಿ ಖರಗ್​ಪುರ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ನ್ಯಾಷನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದೇಶದ ಅತಿ ದೊಡ್ಡ ಆನ್ಲೈನ್​ ಕಲಿಕಾ ಪ್ಲಾಟ್​ಫಾರ್ಮ್ ಆಗಿದೆ. 48 ಮಿಲಿಯನ್​ ಇ-ಬುಕ್​ಗಳು ಹಾಗೂ ವಿವಿಧ ಕ್ಷೇತ್ರದ ಜ್ಞಾನ ಭಂಡಾರವನ್ನು ಹೊಂದಿರುವ ಈ ಪೋರ್ಟಲ್​ಗೆ ನಿತ್ಯ ಸುಮಾರು 3 ಮಿಲಿಯನ್​ ಓದುಗರು ಭೇಟಿ ನೀಡುತ್ತಾರೆ.

ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ (United Nation’s Creative Cities Network) ಸುಸ್ಥಿರ ನಗರ ಅಭಿವೃದ್ಧಿಗಾಗಿ ಸೃಜನಾತ್ಮಕ ಪಾತ್ರ ವಹಿಸುತ್ತಿರುವ ಜಾಗತಿಕ ನಗರಗಳ ಮಧ್ಯೆ ಸಹಕಾರ ಏರ್ಪಡಿಸುವ ದೃಷ್ಟಿಯಿಂದ 2004ರಲ್ಲಿ ಯುನೆಸ್ಕೊ ಸೃಜನಾತ್ಮಕ ನಗರಗಳ ಜಾಲ ಆರಂಭಿಸಲಾಯಿತು. ಸೃಜನಾತ್ಮಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಂಡು ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ ವಿಶ್ವದ 246 ನಗರಗಳು ಈ ಜಾಲದಲ್ಲಿವೆ.

ಕನ್ನಡ ಪುಸ್ತಕದ ವಿಚಾರಕ್ಕೆ ಬಂದರೆ ಕ್ರಿ ಪೂ 2000 ವರ್ಷಗಳ ಹಿಂದಿನಿಂದಲೂ  ಹುಲ್ಲಿನ ಹಾಳೆ , ತಾಳೆಗರಿ  ಅಥವಾ ಬಿದಿರು ಪಟ್ಟೆಗಳ ಮೇಲೆ ತಮ್ಮ ಕಾವ್ಯವನ್ನು ಬರೆದು ರಾಜನ ಆಸ್ಥಾನದಲ್ಲಿ  ವಾಚಿಸುತ್ತಿದ್ದರು. ಆದಿ ಕವಿ ಪಂಪ, ರನ್ನ, ಕುಮಾರವ್ಯಾಸನಿಂದ  ಕುವೆಂಪು,  ಬೇಂದ್ರೆ, ಅಡಿಗ ಕಾರಂತ, ಮಾಸ್ತಿ, ಕಂಬಾರ, ಕಾರ್ನಾಡ್, ಭೈರಪ್ಪ ಮುಂತಾದ ಅನೇಕ ಸಾಹಿತಿಗಳು ತಮ್ಮ ಸಾಹಿತ್ಯ ಸುಧೆಯನ್ನು ಹರಿಸಿದ್ದಾರೆ. ಸುಮಾರು ಇಲ್ಲಿಯವರೆಗೆ   ಸಾವಿರಾರು ಕನ್ನಡ ಪುಸ್ತಕಗಳು ಪ್ರಕಟವಾಗಿ ಓದುಗರ ಮನ ತಣಿಸಿಸಿವೆ.

ಅದರೆ ಡಿಜಿಟಲ್ ಮಾದ್ಯಮದಿಂದಾಗಿ ಕನ್ನಡದಲ್ಲಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಹೇಳುವವರ ಮಧ್ಯೆ ಕನ್ನಡ ಪುಸ್ತಕ‌ಗಳ  ಸಂಖ್ಯೆ ಮತ್ತು ಖರೀದಿಸಿ ಓದುವವರು ಹೆಚ್ಚುತ್ತಿದೆ.

ಇಂದು ಪುಸ್ತಕಗಳು ಕಂಪ್ಯೂಟರ್, ಮೊಬೈಲ್, ಟ್ಯಾಬ್ಲೆಟ್  ಕಿಂಡಲ್ ಗಳ ಮೂಲಕ  ಇ- ಪುಸ್ತಕ ರೂಪದಲ್ಲಿ, ಪಿಡಿಎಫ್ ಫೈಲ್‌ಗಳಾಗಿ, ಅನೇಕ ಓದುಗರಿಗೆ ತಲುಪುತ್ತಿವೆ. ಜೊತೆಗೆ ಆನ್ಲೈನ್ ಮೂಲಕ  ಪುಸ್ತಕಗಳನ್ನು  ಖರೀದಿಸಬಹುದು.

ಪುಸ್ತಕ ಪ್ರಕಟನೆಯ ಕುರಿತಂತೆ ಕನ್ನಡದಲ್ಲಿ ಯಾವುದೇ ರೀತಿಯ ಶೈಕ್ಷಣಿಕ ಕೋರ್ಸುಗಳು ಇಲ್ಲದಿದ್ದರೂ ತಮಗಿರುವ ಸೀಮಿತ ಜ್ಞಾನದಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ತಂತ್ರಜ್ಞಾನದ ಹೆಚ್ಚು ಬಳಕೆಯಿಂದಾಗಿ

ಹಿಂದೆಂದಿಗಿಂತಲೂ  ಇಂದು ಮನುಷ್ಯ ಏಕಾಂಗಿತನಕ್ಕೆ, ಮಾನಸಿಕಕ್ಕೆ ಒಳಗಾಗುತ್ತಿದ್ದಾನೆ. ಇದಕ್ಕೆ ಪರಿಹಾರವೆಂದರೆ ಪುಸ್ತಕಗಳನ್ನು ಓದುವುದುಹಿಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ಪುಸ್ತಕ ಓದುವುದರ ಮೂಲಕ ವಿಶ್ವ ಜ್ಞಾನ ಪಡೆಯುವುದು ಹಾಗೂ ಕ್ರಿಯಾಶೀಲತೆಯನ್ನು ಬೆಳೆಸುವುದು ಎಲ್ಲರ ಆದ್ಯತೆಯಾಗಬೇಕಿದೆ. “ಒಂದು ಪುಸ್ತಕ ಹತ್ತು ಜನ ಸ್ನೇಹಿತರಿಗೆ ಸಮ” ಎಂಬ ಮಾತಿದೆ. ನಾವು ಏಕಾಂಗಿ ಎಂದು ಭಾವಿಸುವವರಿಗೆಲ್ಲಾ ಜೊತೆಯಾಗುವುದಕ್ಕೆ ಈ ಪ್ರಕೃತಿ ಆಗಾಗ ಅವಕಾಶಗಳನ್ನು ಮಾಡಿಕೊಡುತ್ತಿರುತ್ತದೆ. ಆದರೆ ಅದನ್ನು ತೆರದ ಮನಸ್ಸಿನಿಂದ ನೋಡಬೇಕಾದದ್ದು ಅಂತಹ ಏಕಾಂಗಿಯ ಕರ್ತವ್ಯ. ನಮ್ಮ ಜೀವನದ ಅತ್ಯುತ್ತಮ ಜೊತೆಗಾರ ಪುಸ್ತಕ  ಎಂಬುದು  ಪ್ರಸಿದ್ಧರ ಮಾತು.

ಒಬ್ಬ ವ್ಯಕ್ತಿಯ ಜ್ಞಾನವನ್ನು ಹೆಚ್ಚಿಸಲು ಮತ್ತು ಆತನ ಮನೋವಿಕಾಸಕ್ಕೆ ಪುಸ್ತಕಗಳು ನೆರವಾಗುತ್ತವೆ. ಪುಸ್ತಕಗಳು ನಮ್ಮ ಕಲ್ಪನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಒಂದೊಂದು ಪುಸ್ತಕವೂ ತನ್ನದೇ ಆದ ಪ್ರಪಂಚವನ್ನು, ನಮಗೆ ಪರಿಚಯವಿಲ್ಲದ ಜೀವನವನ್ನು ನಮಗೆ ಪರಿಚಯಿಸುತ್ತವೆ. ಹಾಗಾಗಿ ಪುಸ್ತಕಗಳೇ ನಮ್ಮಲ್ಲರ ನಿಜವಾದ ಸಂಗಾತಿಯಾಗಿದೆ. ಪುಸ್ತಕ ಓದುವ ಹವ್ಯಾಸ ಬೆಳಸಿಕೊಳ್ಳೊಣ. ಮುಂದುವರೆಸಿಕೊಂಡು ಹೋಗೋಣ.