ಚಿಕ್ಕಬಳ್ಳಾಪುರ: ರಾಜಕೀಯ ಪ್ರೇರಿತವಾಗಿ ರೈತರನ್ನು ತಪ್ಪು ದಾರಿಗೆ ಎಳೆಯುತ್ತಿದ್ದು, ಇದು ಸಫಲ ಆಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲಾಡಳಿತ ವತಿಯಿಂದ ನಡೆದ 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದ ಬೆನ್ನೆಲುಬು ರೈತರ ಜೀವನಗುಣಮಟ್ಟ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಕೃಷಿಯಲ್ಲಿ ಸುಧಾರಣೆ ತಂದಿದ್ದಾರೆ ಎಂದ ಅವರು, ಕಿಸಾನ್ ಸಮ್ಮಾನ್ ನಡಿ ನೇರವಾಗಿ ಖಾತೆಗೆ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಆಗುತ್ತದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೂಡ ಈ ಯೋಜನೆಯಡಿ ಹಣ ನೀಡುತ್ತಿದ್ದಾರೆ ಎಂದು ಹೇಳಿದರು.
ಆದರೆ ದುರದೃಷ್ಟವೆಂಬಂತೆ ಕೆಲ ಸಂಘಟನೆ, ಮಧ್ಯವರ್ತಿ, ರಾಜಕೀಯ ಪ್ರೇರಿತವಾಗಿ ಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದು ಡಾ. ಸುಧಾಕರ್ ತಿಳಿಸಿದರು.
ಕೊರೊನಾ ಲಸಿಕೆಯನ್ನು ಬೇರೆ ದೇಶಗಳಿಗೂ ರಫ್ತು ಮಾಡಲಾಗುತ್ತಿದೆ. ಇದರಿಂದ ಇತರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಕಾರ್ಯವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ಜಾರಿಯಾದ ದಿನವಿದು. ಕನ್ನಡಿಗ ಬೆನಗಲ್ ನರಸಿಂಗರಾಯರು ಆ ಸಮಿತಿಯಲ್ಲಿದ್ದರು. ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಪ್ರಜಾಪ್ರಭುತ್ವ ದೇಶಕ್ಕೆ ಪೂರಕವಾದ ಸಂವಿಧಾನವಿದು ಎಂದು ಡಾ. ಸುಧಾಕರ್ ಹೇಳಿದರು.