ರಾಜಕಾರಣ ಸಾಕಾಗಿದೆ: ಡಿ.ಕೆ ಸುರೇಶ್

ರಾಮನಗರ: ಇತ್ತೀಚೆಗೆ ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ ಎಂದು ಸಂಸದ ಡಿ .ಕೆ.ಸುರೇಶ್ ರಾಜಕೀಯದ ವೈರಾಗ್ಯದ ಮಾತನ್ನಾಡಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಹೇಳಿದರು.

ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರ ಸಲಹೆ ಪಡೆಯಬೇಕು,ಯಾರು ಸೂಕ್ತವೆಂದು ಅವರು ತೀರ್ಮಾನ ಮಾಡಿದರೆ ಅವರಿಗೆ ಬೆಂಬಲ ಕೊಡುತ್ತೇನೆ ಎಂದು ತಿಳಿಸಿದರು.

ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ. ಹಾಗಾಗಿ ಬೇರೆಯವರಿಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ನನ್ನ ಉದ್ದೇಶ ಎಂದು ಹೇಳಿದರು.

ಸಂಸದರ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರಲ್ಲಾ ಎಂಬ ಪ್ರಶ್ನೆಗೆ, ಅವರಿಗೆ ವ್ಯಂಗ್ಯ ಬಿಟ್ಟು ಬೇರೆ ಏನೂ ಬರಲ್ಲ, ವ್ಯಂಗ್ಯ ಮಾಡಲಿ. ಅಧಿಕಾರದ ದಾಹ ಇದ್ದವರಿಗೆ ರಾಜಕಾರಣ ಬೇಕು. ನನಗಿರುವುದು ಅಭಿವೃದ್ಧಿಯ ದಾಹ. ಇನ್ನೂ ಒಂದು ವರ್ಷ ಸಮಯ ಇದೆ, ನಾನು ಅಭಿವೃದ್ಧಿ ಕಡೆ ಗಮನಕೊಟ್ಟಿದ್ದೀನೆ ಎಂದು ಹೇಳಿದರು.

ಡಿ.ಕೆ.ಸುರೇಶ್ ಸೋಲಿಸಲು ಬಿಜೆಪಿ-ಜೆಡಿಎಸ್ ಹೊಂದಾಣಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಹೊಂದಾಣಿಕೆ ಮಾಡಿಕೊಳ್ಳಲಿ, ಯಾರು ಬೇಕಾದರೂ ನಿಲ್ಲಲಿ. ನನಗಿರುವುದು ಒಂದೇ ಮತ, ಪ್ರಧಾನಿಗಿರುವುದೂ ಒಂದೇ ಮತ. ಆ ಮತವನ್ನ ಯಾರಿಗೆ ಹಾಕಬೇಕೆಂದು ಜನ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ಸುರೇಶ್ ನುಡಿದರು.