ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

ಬೆಳಗಾವಿ: ಕರ್ನಾಟಕದಲ್ಲಿ ರಾಜ್ಯ ಸರ್ಕಾರ ನಿದ್ದೆ ಮಾಡುತ್ತಿದೆ. ಜನರ ಸಮಸ್ಯೆಗಳನ್ನ ಸರ್ಕಾರದ ಗಮನಕ್ಕೆ ತಂದರೂ ಸ್ಪಂದನೆ ಸಿಗುತ್ತಿಲ್ಲ ಎಂದು ವಿಧಾನ ಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮಗಳ ಅಭಿವೃದ್ಧಿಗೆ ಆಗ್ರಹಿಸಿ ಶಾಸಕಿ ಅಂಜಲಿ ನಿಂಬಾಳ್ಕರ್ ಖಾನಾಪುರದಿಂದ ಸುವರ್ಣ ಸೌಧದವರೆಗೆ ಹಮ್ಮಿಕೊಂಡಿದ್ದ ಸುವರ್ಣ ಸೌಧ ಚಲೋ ಪಾದಯಾತ್ರೆ ವೇಳೆ ಹಲಗಾ ಗ್ರಾಮದ ಬಳಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಸಿದ್ದರಾಮಯ್ಯಮಾತನಾಡಿದರು.

ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಪ್ರವಾಹ, ಅತಿವೃಷ್ಟಿ ಮತ್ತು ಬರ  ಜನರನ್ನ ಕಾಡುತ್ತಿದೆ.ಜುಲೈ, ಅಗಸ್ಟ್ ‌ನಲ್ಲಿ ಪ್ರವಾಹ ಬಂದಾಗ ಖಾನಾಪುರಕ್ಕೆ ಬಂದಿದ್ದೆ. ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳಿದ್ದೆವು. ಸುಮಾರು 31ಜಿಲ್ಲೆಗಳ ಪೈಕಿ 23 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾಗಿದೆ. 31ಲಕ್ಷ ಎಕರೆಯಲ್ಲಿ ಬೆಳೆದ ಶೇಕಡಾ 71ರಷ್ಟು ಬೆಳೆ ನಷ್ಟವಾಗಿದೆ ಎಂದು ತಿಳಿಸಿದರು.

ನನ್ನ ಕಾಲದಲ್ಲೂ ಬರ ಬಂದಿತ್ತು. ಆಗ ಎಲ್ಲದಕ್ಕೂ ಪರಿಹಾರ ನೀಡಿದ್ದೆವು.ಬಿಜೆಪಿ ಸರ್ಕಾರ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. 2019ರಲ್ಲಿ ಬಿದ್ದ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ನಾವು ಜಾರಿ ಮಾಡಿದ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಅಕ್ಕಿ ಕೊಡುವುದು, ಶಾದಿ ಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳನ್ನು ನಿಲ್ಲಿಸಿದ್ದಾರೆ. ಇದು ಲಜ್ಜೆಗೆಟ್ಟ ಸರ್ಕಾರ ಎಂದು ಸಿದ್ದು ವಾಗ್ದಾಳಿ ನಡೆಸಿದರು. ಅಧಿವೇಶನದಲ್ಲಿ ನೆರೆ ಪ್ರವಾಹದ ಕುರಿತು ಹಾಗೂ ಖಾನಾಪುರ ಸೇರಿದಂತೆ ಎಲ್ಲದರ ಕುರಿತು ಮಾತನಾಡುತ್ತೇನೆ ಎಂದು ಹೇಳಿದರು.