ಆದಿಚುಂಚನಗಿರಿ: ಬರುವ ಸಂಕ್ರಾಂತಿ ದಿನದಿಂದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಆದಿಚುಂಚನಗಿರಿಯಲ್ಲಿ ಬುಧವಾರ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಸಂತ ಸಮಾವೇಶ ನಡೆಯಿತು.
ರಾಮಮಂದಿರ ರಾಮನಿಗಾಗಿ ಅಲ್ಲ, ನಮ್ಮೆಲ್ಲರ ಆಧ್ಯಾತ್ಮಿಕ ಚೈತನ್ಯಕ್ಕಾಗಿ. ಆದಿಚುಂಚನಗಿರಿ ಮತ್ತು ಅಯೋಧ್ಯೆ ನಡುವೆ ಅವಿನಾಭಾವ ಸಂಬಂಧವಿದೆ ಎಂದು ನಿರ್ಮಲಾನಂದನಾಥ ಶ್ರೀಗಳು ತಿಳಿಸಿದರು.
ಧರ್ಮ ನಮ್ಮ ಆಸ್ತಿ, ಹಣ ನನ್ನ ಆಸ್ತಿಯಲ್ಲ ಎಂಬುದನ್ನು ಶ್ರೀರಾಮ ವನವಾಸಕ್ಕೆ ಹೋಗುವಾಗ ಹೇಳಿದ್ದರು. ಪ್ರತಿ ಹಳ್ಳಿಯಲ್ಲೂ ರಾಮಮಂದಿರ ನಿರ್ಮಾಣವಾಗಿದ್ದವು. ಆ ಎಲ್ಲಾ ರಾಮಮಂದಿರಗಳ ಪ್ರತಿಫಲ ಇಂದಿನ ರಾಮ ಮಂದಿರವಾಗಿದೆ ಎಂದು ಶ್ರೀಗಳು ಹೇಳಿದರು.
ಶ್ರೀಮಠದ ಎಲ್ಲಾ ಶಾಖೆಗಳು ಮುಂದೆ ನಿಂತು ನಿಧಿ ಸಮರ್ಪಣಕ್ಕಾಗಿ ಶ್ರಮಿಸಲಿದೆ ಎಂದು ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ತಿಳಿಸಿದರು.
ರಾಮನ ಆರಾಧನೆಯಿಂದ ರಾಮರಾಜ್ಯ ಸಾಧ್ಯ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಈ ದೊಡ್ಡ ಅಭಿಯಾನದಲ್ಲಿ ನಾಡಿನ ಎಲ್ಲಾ ಸಂತರು ಕೈಜೋಡಿಸಿರುವುದು ಶ್ಲಾಘನೀಯ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರು ಇದರ ನೇತೃತ್ವ ವಹಿಸಿ ಮುನ್ನಡೆಸಲಿದ್ದಾರೆ ಎಂದವರು ಹೇಳಿದರು.
ಮಂದಿರ ನಿರ್ಮಾಣ ಹಿಂದೂ ಸಮಾಜದ ಜವಾಬ್ದಾರಿ ಎಂದು ಸುದೀರ್ ಜೀ ತಿಳಿಸಿ, ನಿಧಿಗೆ ಯಾವುದೇ ಗುರಿ ಇಟ್ಟಿಲ್ಲ. ಆದರೆ 11 ಕೋಟಿ ಹಿಂದುಗಳ ಮನೆಗಳನ್ನು ತಲುಪುವ ಗುರಿ ಹೊಂದಿದ್ದೇವೆ ಎಂದರು. ಕರ್ನಾಟಕದ ಎಲ್ಲಾ ಸಾಧು ಸಂತರು ಸಹಕರಿಸಬೇಕು. ಕಾರ್ಯಕರ್ತರಿಗೆ ಸ್ವಾಮೀಜಿಗಳು ಸಾನಿಧ್ಯ ವಹಿಸಿದರೆ ಆನೆ ಬಲ ಬಂದಂತಾಗುತ್ತದೆಂದರು.
ರಾಮ ಮಂದಿರದ ಆಸ್ತಿ ಯಾರೊಬ್ಬರ ಆಸ್ತಿಯಲ್ಲ, ಪ್ರತಿಯೊಬ್ಬ ಹಿಂದೂವಿನ ಆಸ್ತಿ ಎಂದು ಬೇಲಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಹೇಳಿದರು.
ದೇಶದ ಪ್ರತಿಯೊಬ್ಬ ಹಿಂದುವಿನ ನಂಬಿಕೆ, ಸಂಕಲ್ಪದಿಂದ ಕಟ್ಟಿದ ಅದ್ಬುತ ದೇವಾಲಯ ಎಂಬುದಾಗಲಿ ಎಂದರು ಬೇಲಿ ಮಠದ ಶ್ರೀಗಳು ತಿಳಿಸಿದರು.
ಈ ಸಮಾವೇಶದಲ್ಲಿ ಉಡುಪಿ ಮಠದ ಹಾಗೂ ಶ್ರೀರಾಮ ಮಂದಿರ ನಿರ್ಮಾಣದ ಟ್ರಸ್ಟಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಬೆಂಗಳೂರಿನ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಶ್ರೀ ಚನ್ನಸಿದ್ಶಿದವಚಾರ್ಯ ಸ್ವಾಮೀಜಿ, ಅರಕಲಗೂಡು ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಕೊಡಗಿನ ಶ್ರೀ ರೇಣುಕಾನಂದ ಸ್ವಾಮೀಜಿ, ವೇದಾನಂದ ಕ್ಷೇತ್ರಿಯ ಪ್ರಚಾರಕರಾದ ಸುದೀರ್ ಜೀ, ತಿಪ್ಪೇಸ್ವಾಮಿ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.