ರಾಮ ಮಂದಿರದ ನಿರ್ಮಾಣ ಆಗಿದೆ; ರಾಮರಾಜ್ಯ ಸ್ಥಾಪನೆ ಆಗಬೇಕು – ಪೇಜಾವರಶ್ರೀ

ಮೈಸೂರು: ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಕನಸು ಈಡೇರಿದೆ ಇನ್ನೇನಿದ್ದರೂ ರಾಮರಾಜ್ಯ ಸ್ಥಾಪನೆ ಆಗಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ನಗರದ ಸರಸ್ವತಿಪುರಂನ ಉಡುಪಿ ಕೃಷ್ಣಧಾಮದಲ್ಲಿ ಚಾತುರ್ಮಾಸ ವ್ರತ ಆಚರಣೆಯಲ್ಲಿರುವ ಶ್ರೀಗಳು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.

ರಾಮಮಂದಿರ ನಿರ್ಮಾಣವಾಗಿದೆ, ನಾವೆಲ್ಲರೂ ಸೇರಿ ರಾಮನ ಆಳ್ವಿಕೆಯ ರಾಮರಾಜ್ಯವನ್ನು ನಿರ್ಮಿಸಬೇಕು ಎಂದು ಹೇಳಿದರು.

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪಿಸಿ ಸಂಕ್ರಾಂತಿಯ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗಿದೆ ಎಂದು ಶ್ರೀಗಳು ತಿಳಿಸಿದರು.

ಪ್ರತಿಯೊಬ್ಬರೂ ತಮ್ಮ ಕಾರ್ಯಕ್ಷೇತ್ರದಲ್ಲಿ ಸಮಾಜಕ್ಕೆ ಕೊಡುಗೆ ನೀಡಬೇಕು. ರಾಮನ ಗುಣಗಳಲ್ಲಿ ಎಲ್ಲರೂ ಒಂದೊಂದು ಗುಣ ಅಳವಡಿಸಿಕೊಂಡರೆ ರಾಮರಾಜ್ಯ ಕಲ್ಪನೆ ನನಸಾಗಲಿದೆ.

ರಾಮಭಕ್ತಿ ಬೇರೆ ಅಲ್ಲ, ದೇಶಭಕ್ತಿ ಬೇರೆ ಅಲ್ಲ.   ಅಸಹಾಯಕರಿಗೆ, ಬಡವರಿಗೆ, ಕಷ್ಟದಲ್ಲಿ ರುವವರಿಗೆ ಅವರವರ ವೃತ್ತಿ ಸೀಮೆಯಲ್ಲಿ ನೆರವಾಗುವುದೇ ರಾಮ ಸೇವೆ ಎಂದು ಹೇಳಿದರು.

ಗೋವುಗಳ ರಕ್ಷಣೆಗೆ ಮಠದಿಂದ ಹೆಚ್ಚಿನ ಒತ್ತು ನೀಡಲಾಗಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ತೆರೆಯಬೇಕೆಂಬುದು ನಮ್ಮ ಆಪೇಕ್ಷೆಯಾಗಿದೆ, ನಾವು ಕಾರ್ಯೋನ್ಮಖರಾಗಿದ್ದೇವೆ ಎಂದು ಶ್ರೀಗಳು ಹೇಳಿದರು.

ಇಂದು ಸಮಾಜದಲ್ಲಿ ಅನೇಕ ಬಗೆಯ ಗೊಂದಲಗಳು ಸೃಷ್ಟಿಯಾಗಿವೆ. ಹಿಂಸೆಯ ವೈಭವೀಕರಣವಾಗುತ್ತಿದೆ. ವಿದೇಶಗಳಲ್ಲಿ ಅಪರಾಧ ಮಾಡಲು ಹಿಂದೆ ಮುಂದೆ ನೋಡುತ್ತಾರೆ. ಆದರೆ ನಮ್ಮಲ್ಲಿ ಆ ರೀತಿ ಇಲ್ಲ.

ಕಾನೂನಿನ ಮೇಲೆ ಭಯವೇ ಇಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಥವಾಗಿ ಕಾರ್ಯ ನಿರ್ವಹಿಸಬೇಕು. ಜನರ ವಿಶ್ವಾಸಗಳಿಸಬೇಕು. ಪತ್ರಿಕಾರಂಗ ಸಮಾಜ ಕಟ್ಟುವ ಕೆಲಸ ಮಾಡಬೇಕು. ಸಾಮರಸ್ಯ ಗಟ್ಟಿಗೊಳಿಸುವ ಕೆಲಸವನ್ನು ಮಾಡುವ ಮೂಲಕ ಪತ್ರಿಕಾರಂಗ ಸಮಾಜದಲ್ಲಿ ಮಾದರಿಯಾಗಿ ನಿಲ್ಲಬೇಕು ಎಂದು ಸಲಹೆ ನೀಡಿದರು.

ಮಣಿಪುರ ಸಂಘರ್ಷ: ಸಂಧಾನಕ್ಕೆ ಸಿದ್ಧ

ಮಣಿಪುರ ಪ್ರಕರಣವನ್ನು ಇಲ್ಲಿಯವರೆಗೆ ಬೆಳೆಯಲು ಬಿಟ್ಟಿದ್ದು ಸರಿಯಲ್ಲ, ಅದೊಂದು ದೊಡ್ಡ ಕಂಗಂಟಾಗಿದೆ ಎಂದು ಇದೇ‌ ವೇಳೆ ಶ್ರೀಪಾದಂಗಳು ತಿಳಿಸಿದರು.

ಅಲ್ಲಿ ನಡೆಯುತ್ತಿರುವ ಹಿಂಸೆಗೆ ಮೂಲ ಕಾರಣವೇನು ಎಂಬುದೇ ಅರ್ಥವಾಗುತ್ತಿಲ್ಲ. ಅಲ್ಲಿ ಪರಿಸ್ಥಿತಿ ಕೈಮೀರಿದೆ. ಇಷ್ಟಾಗಿಯೂ ತಾವು ಆ ರಾಜ್ಯದಲ್ಲಿ ಸಂಘರ್ಷಕ್ಕೆ ನಿಂತಿರುವ ಗುಂಪುಗಳ ಜೊತೆ ಮಾತನಾಡಿ ಶಾಂತಿ ಸ್ಥಾಪಿಸಲು ಮಧ್ಯ ಪ್ರವೇಶ ಮಾಡಲು ಸಿದ್ಧವಿದ್ದೇನೆ ಎಂದು ಶ್ರೀಗಳು ತಿಳಿಸಿದರು.

ಅದಕ್ಕೆ ಅನುಮತಿ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಒಂದು ವೇಳೆ ಅನುಮತಿ ನೀಡಿದರೆ ಮಣಿಪುರದಲ್ಲಿ ಶಾಂತಿ ಸುವ್ಯವಸ್ಥೆ ಸ್ಥಾಪಿಸಲು ಮುಂದಾಗುತ್ತೇನೆ ಎಂದು ಶ್ರೀ ವಿಶಪ್ರಸನ್ನ ತೀರ್ಥ ಸಾಮೀಜಿ ಹೇಳಿದರು.