ಸದನದಲ್ಲಿ ಕ್ಷಮೆ ಯಾಚಿಸಿದ ರಮೇಶ್ ಕುಮಾರ್

ಬೆಳಗಾವಿ:ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಶಸಕ ಕೆ.ಆರ್.ರಮೇಶ್‍ಕುಮಾರ್ ಶುಕ್ರವಾರ ವಿಧಾನಸಭೆಯಲ್ಲಿ ಬಹಿರಂಗ ಕ್ಷಮೆ ಕೇಳಿದರು.

ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ವಯಂಪ್ರೇರಿತರಾಗಿ ಹೇಳಿಕೆ ನೀಡಿದ ಅವರು, ನಾನು ಯಾರಿಗೂ ಯಾವುದೇ ರೀತಿಯಲ್ಲೂ ಮನಸಿಗೆ ನೋವುಂಟು ಮಾಡುವ ಉದ್ದೇಶದಿಂದ ಹೇಳಿಕೆ ಕೊಟ್ಟಿಲ್ಲ. ಅಚಾನಕ್ ಆಗಿ  ಹೇಳಿಬಿಟ್ಟಿದ್ದೇನೆ. ನನ್ನ ಹೇಳಿಕೆಯಿಂದ ಯಾರ ಮನಸಿಗಾದರೂ ನೋವಾಗಿದ್ದರೆ ಬಹಿರಂಗವಾಗಿ ಕ್ಷಮೆ ಕೇಳುತ್ತೇನೆ ಇದರಲ್ಲಿ ಯಾವ ಮುಜುಗರವೂ ಇಲ್ಲ. ಯಾವ ಪ್ರತಿಷ್ಠೆಯೂ ಅಡ್ಡ ಬರುವುದಿಲ್ಲ ಎಂದು ಹೇಳಿದರು.

ಈಗಾಗಲೇ ನನ್ನ ಹೇಳಿಕೆಗೆ ಕೆಲವರು ತೀರ್ಪು ಕೊಟ್ಟು ಶಿಕ್ಷೆಯನ್ನೂ ನೀಡಿದ್ದಾರೆ. ನನಗೆ ಯಾರ ಮನಸ್ಸನ್ನೂ ನೋಯಿಸಬೇಕೆಂಬ ದುರದ್ದೇಶ ಇರಲಿಲ್ಲ. ಸಾಂದರ್ಭಿಕವಾಗಿ ಈ ಮಾತನ್ನು ಹೇಳಿದ್ದೇನೆ ಹೊರತು ಮಹಿಳೆಯರನ್ನು ಗುರಿಯಾಗಿಟ್ಟುಕೊಂಡು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವ ಸನ್ನಿವೇಶದಲ್ಲಿ ಹೇಳಿದ್ದೇನೆ ಎಂದು ಕೆಲವರು ಅರ್ಥ ಮಾಡಿಕೊಳ್ಳುತ್ತಿಲ್ಲ. ನಾನು ಸದಾ ಕಾಲ ಮಹಿಳೆಯರಿಗೆ ಗೌರವ ಕೊಡುವ ವ್ಯಕ್ತಿ. ಅವರನ್ನು ಪೂಜ್ಯ ಭಾವನೆಯಿಂದ ಕಾಣುತ್ತೇನೆ ಎಂದು ರಮೇಶ್ ಕುಮಾರ್ ಹೇಳಿದರು.

ಶಾಸಕಿ ಅಂಜಲಿ ನಿಂಬಾಳ್ಕರ್ ಮಾತನಾಡಿ, ರಮೇಶ್‍ಕುಮಾರ್ ಒಬ್ಬರೇ ಕ್ಷಮೆ ಕೇಳಿದರೆ ಸಾಲದು ಇಡೀ ಸದನವೇ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.