ಮೈಸೂರು: ಮೈಸೂರಿನ ಹೊರವಲಯದಲ್ಲಿ ನಡೆದಿರುವ ರೇವ್ ಪಾರ್ಟಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಾಹಿತಿ ನೀಡಿದ್ದು,ಪೊಲಿಸರು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಪೊಲೀಸರು ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮುಡಾ ಪ್ರಕರಣ ಕುರಿತು ದೂರುದಾರ ಸ್ನೇಹಮಹಿ ಕೃಷ್ಣ ಯಾರು ಎಂಬುದೇ ನನಗೆ ಗೊತ್ತಿಲ್ಲ ಎಂದು ಇದೇ ವೇಳೆ ಸಿದ್ದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ನಾನು ಇವತ್ತಿನವರೆಗೂ ಸ್ನೇಹಮಯಿ ಕೃಷ್ಣ ಎಂಬುವವರನ್ನು ನೋಡಿಯೇ ಇಲ್ಲ.ಅವರ ಮೇಲೆ ಏನೇನು ಕೇಸ್ ಗಳಿದೆ ಅದೂ ಕೂಡಾ ನನಗೆ ಗೊತ್ತಿಲ್ಲ ಎಂದು ಹೇಳಿದರು.
ಅವರು ಕೇಸ್ ಕೊಟ್ಟಿರಬಹುದು ಹಾಗಾದ ತಕ್ಷಣ ಅದು ತನಿಖೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ಅವರು ದೂರು ಕೊಟ್ಟಿದ್ದಾರೆ ಕೊಡಲಿ ಬಿಡಿ,
ಈಗ ಮುಡಾ ವಿಚಾರ ನ್ಯಾಯಾಲಯದಲ್ಲಿದೆ, ಹಾಗಾಗಿ ಅದರ ಬಗ್ಗೆ ಹೆಚ್ಚು ಕಾಮೆಂಟ್ ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ಲೋಕಾಯುಕ್ತ ಎಡಿಜಿಪಿ ಮತ್ತು ಕುಮಾರಸ್ವಾಮಿ ನಡುವೆ ಜಟಾಪಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ,
ಕುಮಾರಸ್ವಾಮಿಯನ್ನು ಎಡಿಜಿಪಿ ಹಂದಿ ಎಂದು ಕರೆದಿದ್ದಾರಾ,
ಇಲ್ಲಾ ತಾನೇ, ಅವರು ಇಂಗ್ಲೀಷ್ ನ ಬರ್ನಾಡ್ ಶಾರ ವಾಕ್ಯವನ್ನು ಉಲ್ಲೇಖಿಸಿದ್ದಾರೆ ಅಷ್ಟೇ ಎಂದು ಹೇಳಿದರು.
ಕುಮಾರಸ್ವಾಮಿ ಎಡಿಜಿಪಿ ಮೇಲೆ ಕೆಲವೊಂದಿಷ್ಟು ಆರೋಪ ಮಾಡಿದ್ದರು.
ಅದಕ್ಕೆ ಅವರು ಕೂಡಾ ಕೆಲವು ಉತ್ತರಗಳನ್ನ ಕೊಟ್ಟಿದ್ದಾರೆ,ನಾನು ಈ ವಿಚಾರದ ಬಗ್ಗೆ ಹೆಚ್ಚು ವಿವರಣೆ ನೀಡುವುದಿಲ್ಲ,ಅದರಲ್ಲೂ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಹೇಳಿದ್ದೇನೆ,ಅವರು ತಪ್ಪು ಮಾಡಿ ಬಿಟ್ಟಿದ್ದಾರೆ.
ಹೀಗಾಗಿ ಬೇರೆಯವರ ಮೇಲೆ ಸುಳ್ಳು ಆರೋಪಗಳನ್ನ ಮಾಡುತ್ತಿದ್ದಾರೆ ಅಷ್ಟೇ ಎಂದು ಸಿದ್ದರಾಮಯ್ಯ ತಿಳಿಸಿದರು.