ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್‌  ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಕೋರ್ಟ್‌ಗೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ.

ಬುಧವಾರ 24ನೇ ಎಸಿಎಂಎಂ ಕೋರ್ಟ್‌ಗೆ ಸುಮಾರು 3,991 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

ಕಾಮಾಕ್ಷಿಪಾಳ್ಯ ಇನ್‌ಸ್ಪೆಕ್ಟರ್‌, ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖಾಧಿಕಾರಿ ಎಸಿಪಿ ಚಂದನ್‌ ಕುಮಾರ್‌ ಅವರ ನೇತೃತ್ವದಲ್ಲಿ ಕೋರ್ಟ್‌ಗೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 17 ವ್ಯಕ್ತಿಗಳನ್ನು ದಸ್ತಗಿರಿ ಮಾಡಿ, ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ಇದುವರೆಗೆ ನಡೆಸಿದ ತನಿಖೆಯಲ್ಲಿ ಸಂಗ್ರಹಿಸಿರುವ ಪ್ರತ್ಯಕ್ಷ, ಸಾಂದರ್ಭಿಕ, ತಾಂತ್ರಿಕ, ವೈಜ್ಞಾನಿಕ ಹಾಗೂ ಇತರೆ ಸಾಕ್ಷ್ಯಾಧಾರಗಳ ಕುರಿತ ದೋಷಾರೋಪಣಾ ಪಟ್ಟಿಯನ್ನು  ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.

ಈ ದೋಷಾರೋಪಣಾ ಪಟ್ಟಿಯು ಒಟ್ಟು 231 ಸಾಕ್ಷಿದಾರರನ್ನು ಒಳಗೊಂಡಂತೆ ಒಟ್ಟು 3991 ಪುಟಗಳುಳ್ಳ 7 ಸರಿಪುಟಗಳ 10 ಕಡತಗಳನ್ನು ಒಳಗೊಂಡಿದೆ.

ದರ್ಶನ್‌ ಮತ್ತು ಗ್ಯಾಂಗ್‌ ವಿರುದ್ಧ ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಒಟ್ಟು 231 ಸಾಕ್ಷಿಗಳನ್ನು ಕಲೆಹಾಕಲಾಗಿದ್ದು, ಇದರಲ್ಲಿ ಪ್ರತ್ಯಕ್ಷ ಸಾಕ್ಷಿದಾರರು 3, ಎಫ್ ಎಸ್‌ ಎಲ್/ಸಿಎಫ್‌ಎಸ್‌ಎಲ್‌ ಸಾಕ್ಷಿಗಳು 8, ಸಿಆರ್‌ಪಿಸಿ ಸೆಕ್ಷನ್‌ 161 ಮತ್ತು 164 ರ ಅಡಿಯಲ್ಲಿ 97 ಸಾಕ್ಷಿಗಳು (ಸಿಆರ್‌ಪಿಸಿ 164 ಅಡಿಯಲ್ಲಿ 27 ಜನ ಸಾಕ್ಷಿದಾರರು ಸೇರಿ), ಪಂಚರು 59, ಇತರೇ ಸರ್ಕಾರಿ ಅಧಿಕಾರಿಗಳು (ತಜಶೀಲ್ದಾರ್‌, ವೈದ್ಯರು, ಆರ್‌ಟಿಒ, ಅಭಿಯಂತರರು) 8 ಹಾಗೂ ಪೊಲೀಸರಿಂದ 56 ಸಾಕ್ಷಿಗಳನ್ನು ಸಂಗ್ರಹಿಸಿರುವುದಾಗಿ ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಬೆಂಗಳೂರು ನಗರ ಪೊಲೀಸ್‌ ಆಯಿಕ್ತ ಬಿ.ದಯಾನಂದ್ ಹೆಚ್ಚುವರಿ ಆಯುಕ್ತ ಸತೀಶ್‌ ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಎಸ್‌. ಗಿರೀಶ್, ನೇತೃತ್ವದಲ್ಲಿ ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎನ್‌. ಚಂದನ್‌ ಕುಮಾರ್ ಹಾಗೂ ಅಧಿಕಾರಿ, ಸಿಬ್ಬಂದಿಯನ್ನೊಳಗೊಂಡ ತಂಡ ಭೇದಿಸಿದೆ.

ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣದಲ್ಲಿ ಇನ್ನೂ ಹೆಚ್ಚಿನ ತನಿಖೆಯನ್ನು ಕೈಗೊಂಡು ಸಂಗ್ರಹವಾಗುವ ಸಾಕ್ಷಾಧಾರಗಳನ್ನು ಕಲಂ-173(8) ಸಿಆರ್‌ಪಿಸಿ ಅಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.