ಮೈಸೂರು: ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಸಂಬಂಧ ಪಟ್ಟ ಬ್ರಾಹ್ಮಣ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಮತ್ತು ಸಾಮಾಜಿಕ ಭದ್ರತೆ ಯೋಜನೆಯಡಿಲ್ಲಿ ನಿಂತುಹೋಗಿದ್ದ ವಿವಿಧ ಪಿಂಚಣಿಗಳ ಆದೇಶ ಪತ್ರಗಳನ್ನು ಸಾಂಕೇತಿಕವಾಗಿ ಶಾಸಕ ಎಸ್.ಎ.ರಾಮದಾಸ್ ಬುಧವಾರ ಚಾಲನೆ ನೀಡಿದರು.
ನಂತರ ಎಸ್.ಎ.ರಾಮದಾಸ್ ರವರು ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸಮಾಜದ ಕಟ್ಟಕಡೆಯ ವ್ಯಕ್ತಿ ಯಾರಿದ್ದಾರೆ ಅವರಿಗೂ ಶಿಕ್ಷಣ ದೊರೆಯಬೇಕು, ಕೆಲಸದಲ್ಲಿ ಮೀಸಲಾತಿ ಕೊಡಬೇಕು ಹಾಗೂ ಆರ್ಥಿಕವಾಗಿ ದುರ್ಬಲರಾದವರಿಗೆ ಅಂದರೆ ಯಾರು ಎಸ್.ಟಿ, ಎಸ್.ಸಿ, ಒಬಿಸಿ ಕ್ಯಾಟಗರಿಯಲ್ಲಿ ಬರುವುದಿಲ್ಲ ಅಂತವರಿಗೂ ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಟ್ಟು ರಕ್ಷಣೆ ಕೊಡುವಂತಹ ವ್ಯವಸ್ಥೆಯನ್ನು ಜಾರಿಗೆ ತಂದಿರುತ್ತಾರೆಂದರು.
ದೇಶದ ಬೇರೆ ಬೇರೆ ರಾಜ್ಯದಲ್ಲಿ ಈಗಾಗಲೇ ಅನ್ವಯವಾಗಿರುತ್ತದೆ ನಮ್ಮ ರಾಜ್ಯದಲ್ಲಿ ಶಿಕ್ಷಣಕ್ಕೆ ಮಾತ್ರವಿತ್ತು ಈಗ ಉದ್ಯೋಗದಲ್ಲೂ ಸೇರಿಸಲು ಪ್ರಾರಂಭವಾಗಿರುತ್ತದೆ. ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಒಂದು ಕಮಿಟಿಯನ್ನು ರೂಪಿಸಿ ಅದರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು ಯಾವ ಯಾವ ಜಾತಿಗಳು ಈ ವರ್ಗಗಳಲ್ಲಿ ಬರುತ್ತದೆಯೋ ಅವರಿಗೆ ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಒದಗಿಸುವ ಜವಾಬ್ದಾರಿ ತಹಸೀಲ್ದಾರ್ ಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಕರ್ನಾಟಕದಲ್ಲಿ ಸುಮಾರು 144 ಜಾತಿಗಳಿದ್ದು, ಇಂತವ ಜಾತಿಯಲ್ಲಿ ಇರುವವರಿಗೆ ಅದರಲ್ಲೂ ಬ್ರಾಹ್ಮಣ ಮತ್ತು ಮುಂತಾದ ಜಾತಿಗಳಲ್ಲಿ ಇರುವ ಅರ್ಜಿದಾರರ ವಾರ್ಷಿಕ ಆದಾಯ 8 ಲಕ್ಷ ರೂ.ಗಿಂತ ಕಡಿಮೆ ಇರುವಂತವರು ಅಗತ್ಯ ನಿಗದಿತ ದಾಖಲಾತಿಗಳೊಂದಿಗೆ ಅಟಲ್ ಜೀ ಜನಸ್ನೇಹ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿದ್ದಲ್ಲಿ ಅಂತವರಿಗೆ ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರ ಸೇರಿದಂತೆ ಇನ್ನಿತರೆ ಜಾತಿಗಳಿಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆಂದು ರಾಮದಾಸ್ ಅವರು ಹೇಳಿದರು.
ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಇ.ಡಬ್ಲು.ಎಸ್ ಕೋಟಾದ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿರುತ್ತದೆಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರತ್ನಾಂಬಿಕ, ಉಪ ತಹಸೀಲ್ದಾರ್ ರೂಪ ಪ್ರಕಾಶ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಲಿ ಸದಸ್ಯ ಬಾಲಕೃಷ್ಣ.ಎಂ.ಆರ್ ಮತ್ತು ಕ್ಯಾಪ್ಟನ್ ಗೋಪಿನಾಥ್ ರವರು ಹಾಜರಿದ್ದರು.