ಕಮಿಷನ್ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ: ಡಿ.ಕೆ ಶಿವಕುಮಾರ್

ಬೆಂಗಳೂರು: ನಾನು 15% ಕಮೀಷನ್ ಕೇಳಿದ್ದೇನೆ ಎಂಬುದನ್ನು ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್  ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಬೊಮ್ಮಾಯಿ, ಆರ್. ಅಶೋಕ್  ಅವರಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ ಎಂದರು.

5 ಸಾವಿರ ಕೋಟಿ, 3 ಸಾವಿರ ಕೋಟಿ ಬಿಲ್ ಏಕೆ ಉಳಿಸಿಕೊಂಡಿರಿ, ನಿಮ್ಮ ಅವಧಿಯಲ್ಲಿ ಏಕೆ ಬಿಲ್ ನಿಲ್ಲಿಸಿದಿರಿ ಮುಖ್ಯಮಂತ್ರಿಗಳು ಕೆಂಪಣ್ಣ ಜತೆ ಜೋಡಿಸಿದ್ದಾರೆ. ಕೆಂಪಣ್ಣ ನಮ್ರತೆಯಿಂದ ಮನವಿ ಮಾಡಿಕೊಂಡರು. ಐಎಎಸ್ ಆಫೀಸರ್ ನೇತೃತ್ವದಲ್ಲಿ ಕಮಿಟಿ ಏರ್ಪಡಿಸಲಾಗಿದೆ. ಈಗ ಯಾಕೆ ಅಜೆರ್ಂಟ್ ಮಾಡ್ತಿದ್ದಾರೆ, ಯಾಕೆ ನೀವು ಬಿಲ್ ಕೊಡಲಿಲ್ಲಾ, ಅವರು ಫಸ್ಟ್ ಉತ್ತರ ಕೊಡಬೇಕು ಎಂದು ಪ್ರಶ್ನೆಗಳನ್ನು ಹಾಕಿದರು.

ನನಗೆ ನನ್ನದೇ ಆದ ವ್ಯಕ್ತಿತ್ವ ಇದೆ. ತನಿಖೆ ಎಲ್ಲಾ ಕಡೆ ಮಾಡುತ್ತಾರೆ. ಕೆಲಸ ಮಾಡಿದರೆ ಹಣ ಕೊಡುತ್ತಾರೆ. ಬಿಜೆಪಿ ಅಧಿಕಾರದಲ್ಲಿ ಮೂರನಾಲ್ಕು ವರ್ಷ ತಡೆದುಕೊಂಡಿದ್ದಾರೆ. ಈಗ ಯಾಕೆ ಅರ್ಜೆಂಟ್ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದಲ್ಲಿ ಕೇಳುವ ಹಕ್ಕಿದೆ. ಯಾರು ಆ ದುಡ್ಡು ಕೇಳಿದ್ದು, ನಮ್ಮ ಆಫೀಸರ್ ಗೆ ರಿಪೋರ್ಟ್ ಕೇಳಿದ್ದೀನಿ. ಯಾರು ಯಾರು ಮಾತಾಡ್ತಿದ್ದಾರೆ,ಯಾರು ಯಾರ ಹಿಂದಿದ್ದಾರೆ ಎಲ್ಲಾ ಗೊತ್ತು ಎಂದು ಡಿಕೆಶಿ ಹೇಳಿದರು.

ಸಾಮ್ರಾಟ್ ಅಶೋಕ್ ಏನು ಮಾತನಾಡಿದರು, ಬೊಮ್ಮಾಯಿ ಏನು ಮಾತನಾಡಿದರು, ಕುಮಾರಣ್ಣ ಓ ಅಣ್ಣ ಅನ್ನೋ ಹಾಗಿಲ್ವಲ್ಲ. ಕುಮಾರಸ್ವಾಮಿ  ಅವರು ಏನು ಮಾತಾಡಿದರು ಯಾಕೆ ಮಾತನಾಡಿದರು,

ಬೊಮ್ಮಾಯಿ, ಅಶೋಕ್ ಅವರ ಅವಧಿಯಲ್ಲಿ ಯಾಕೆ ಹಣ ಬಿಡುಗಡೆ ಮಾಡಲಿಲ್ಲ. ಕೆಂಪಣ್ಣ ಎಲ್ಲೂ ಅಧಿಕಾರಿಗಳು ಹಣ ಕೇಳಿದ್ದಾರೆ ಅಂತ ಹೇಳಿಲ್ಲ. ಹಾಗೇನಾದರು ಯಾರಾದರು ಕೇಳಿದರೆ ಆ ಅಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲಿ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ಅಜ್ಜಯ್ಯನ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಎಂಬ ಗುತ್ತಿಗೆದಾರರ ಸವಾಲಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿಗಳು ರಸ್ತೆಯಲ್ಲಿ ಹೋಗುವವರ ಪ್ರಶ್ನೆಗೆಲ್ಲ ಉತ್ತರ ಕೊಡಲ್ಲ. ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.