ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಶಾಲಾ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಎಸಗಿದ್ದ ಯುವಕನಿಗೆ ಚಾಮರಾಜನಗರ ಜಿಲ್ಲಾ ಪ್ರಧಾನ ನ್ಯಾಯಾಧೀಶರಾದ ಸದಾಶಿವ ಎಸ್.ಸುಲ್ತಾನಪುರಿ 20 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
ಚಾಮರಾಜನಗರದ ಮೇಗಲ ಉಪ್ಪಾರ ಬೀದಿಯ ಚಂದ್ರಶೇಖರ್ (21) ಶಿಕ್ಷೆಗೊಳಗಾದ ವ್ಯಕ್ತಿ.
16 ವರ್ಷದ ಶಾಲಾ ಬಾಲಕಿಯನ್ನು ಸತತವಾಗಿ ಹಿಂಬಾಲಿಸಿ, ಲವ್ವೆಂದು ಪುಸಲಾಯಿಸಿ ಅಪಹರಣಗೊಳಿಸಿದ್ದಲ್ಲದೇ ಕೋಡಿಮೋಳೆ ಗ್ರಾಮದ ಮಹಾದೇವಮ್ಮ ಎಂಬವರ ಮನೆಯಲ್ಲಿ ಇರಿಸಿಕೊಂಡಿದ್ದ.
5 ದಿನಗಳ ಕಾಲ ಬಾಲಕಿಯನ್ನು ತನ್ನ ಜೊತೆ ಇರಿಸಿಕೊಂಡಿದ್ದ ಚಂದ್ರಶೇಖರ್ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಲೈಂಗಿಕ ದೌರ್ಜನ್ಯ ಎಸಗಿದ್ದು ಸಾಕ್ಷಾಧಾರಗಳಿಂದ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಅಪರಾಧಿಗೆ 20 ವರ್ಷ ಕಠಿಣ ಶಿಕ್ಷೆ, 6.25 ಲಕ್ಷ ರೂ. ದಂಡ ಹಾಗೂ ಅಪರಾಧಿಗೆ ಸಹಕರಿಸಿದ ಮಹಾದೇವಮ್ಮಗೆ 5 ವರ್ಷ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡ ವಿಧಿಸಿದ್ದಾರೆ. ಜೊತೆಗೆ, ಕಾನೂನು ಸೇವಾ ಪ್ರಾಧಿಕಾರವು 7.5 ಲಕ್ಷ ರೂ. ಪರಿಹಾರ ಕೊಡಬೇಕೆಂದು ಆದೇಶಿಸಿದ್ದಾರೆ.
ಈ ಘಟನೆ 2018ರ ಜುಲೈನಲ್ಲಿ ಚಾಮರಾಜನಗರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.