ಹುಬ್ಬಳ್ಳಿ: ದೇಶದಲ್ಲೇ ತೀವ್ರ ಸಂಚಲನ ಮೂಡಿಸಿದ್ದ ಹುಬ್ಬಳ್ಳಿ ಕಾಂಗ್ರೆಸ್ ಪಾಲಿಕೆ ಸದಸ್ಯ ನಿರಂಜನ್ ಅವರ ಪುತ್ರಿ ನೇಹಾ ಹತ್ಯೆ ಮಾಸುವ ಮುನ್ನವೇ ಮತ್ತೊಬ್ಬ ಯುವತಿ ಕೊಲೆ ನಡೆದಿದೆ.
ಹುಬ್ಬಳ್ಳಿಯಲ್ಲಿ ಘಟನೆ ನಡೆದಿದ್ದಯ,ಮನೆಯವರ ಮುಂದೆಯೇ ಯುವತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ
ಅಂಜಲಿ ಅಂಬಿಗೇರ (21) ಕೊಲೆಯಾದ ಯುವತಿ. ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿ ಘಟನೆ ನಡೆದಿದ್ದು, ಅಂಜಲಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ಹಂತಕ ಎಸ್ಕೇಪ್ ಆಗಿದ್ದಾನೆ.
ಗಿರೀಶ್ ಅಲಿಯಾಸ್ ವಿಶ್ವ ಹತ್ಯೆ ಮಾಡಿದ್ದು, ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆಯೇ ಅಂಜಲಿಯನ್ನು ಎಳೆದಾಡಿ ಚಾಕುವಿನಿಂದ ಚುಚ್ಚಿ ಭೀಕರವಾಗಿ ಕೊಂದಿದ್ದಾನೆ.
ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದುಕೊಂಡು ಹೋಗಿ ಹೊಟ್ಟೆಗೆ ಚುಚ್ಚಿದ್ದಾನೆ.
ಅಲ್ಲಿಂದ ಅಡುಗೆ ಮನೆಗೆ ಎಳೆದೊಯ್ದು ದೇಹದ ಸಿಕ್ಕ,ಸಿಕ್ಕ ಜಾಗದಲ್ಲಿ ಚುಚ್ಚಿ ಅಂಜಲಿ ಸಾವು ಖಚಿತವಾದ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ.
ಕಳೆದ ಮೂರು ತಿಂಗಳ ಹಿಂದೆ ಅಂಜಲಿ ಮನೆಯಿಂದ ಹೋಗಿದ್ದು, ಎಂಟು ದಿನಗಳ ಹಿಂದೆ ಮನೆಗೆ ಬಂದಿದ್ದಳು. ಕೊಲೆಯಾದ ಅಂಜಲಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದಳು ಎಂದು ತಿಳಿದುಬಂದಿದೆ.
ಕೊಲೆ ಮಾಡಿದ ವಿಶ್ವ ಮತ್ತು ಅಂಜಲಿ ಸಹಪಾಠಿಗಳಾಗಿದ್ದು, ಉತ್ತಮ ಒಡನಾಟ ಹೊಂದಿದ್ದರು. ಸಲುಗೆಯಿಂದ ಇದ್ದ ಅಂಜಲಿಯನ್ನು ವಿಶ್ವ ತಪ್ಪಾಗಿ ತಿಳಿದುಕೊಂಡಿದ್ದ. ನನ್ನ ಜೊತೆ ಸುತ್ತಾಡಲು ಬಾ ಎಂದು ಪೀಡಿಸುತ್ತಿದ್ದ. ಇದಕ್ಕೆ ಅಂಜಲಿ ನಿರಾಕರಿಸಿದ್ದಳು. ಕೋಪಗೊಂಡ ಗಿರೀಶ್ ಅಲಿಯಾಸ್ ವಿಶ್ವ ಬುಧವಾರ ಮುಂಜಾನೆ ಅಂಜಲಿ ಮನೆಗೆ ನುಗ್ಗಿ ಕೊಲೆ ಮಾಡಿದ್ದಾನೆ.
ಆರೋಪಿ ವಿಶ್ವ ಒಂದು ವಾರದ ಹಿಂದೆಯೇ ಅಂಜಲಿಗೆ ಜೀವ ಬೆದರಿಕೆ ಹಾಕಿದ್ದು, ನನ್ನ ಜೊತೆಗೆ ಬಾರದಿದ್ದರೆ ನೇಹಾ ರೀತಿ ಕೊಲೆ ಮಾಡುವೆ ಎಂದು ವಾರ್ನಿಂಗ್ ಮಾಡಿದ್ದನಂತೆ.
ಅಂಜಲಿ ಕುಟುಂಬದವರು ಬೆಂಡಿಗೇರಿ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದರು. ಆದರೆ ಪೊಲೀಸರು ಅಂಜಲಿ ಕುಟುಂಬಸ್ಥರಿಗೆ ಬೈದು ನಿಮ್ಮದು ಮೂಢನಂಬಿಕೆ ಹಾಗೇನು ಆಗಲ್ಲ ಎಂದು ಹೇಳಿದ್ದರೆಂದು ಕುಟುಂಬಸ್ಥರು ಬೇಸರ ಪಟ್ಟಿದ್ದಾರೆ.
ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.