ಸಾಹಿತ್ಯ ಲೋಕದ ಪೈಲ್ವಾನ್ ಹಂಪನಾ -ಡಿಕೆಶಿ

ಮೈಸೂರು: ಕಳೆದ ವರ್ಷ ಸಂಗೀತ ಕ್ಷೇತ್ರದ ದಿಗ್ಗಜ ಹಂಸಲೇಖರನ್ನ ಕರೆಸಿ ದಸರಾ ಉದ್ಘಾಟಿಸಲಾಗಿತ್ತು. ಈ ಬಾರಿ ಸಾಹಿತ್ಯ ಕ್ಷೇತ್ರದ ಪೈಲ್ವಾನ್ ಹಂಪನಾ ಅವರನ್ನು ಕರೆಸಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ವೇಳೆ ಮಾತನಾಡಿದ‌ ಡಿಕೆಶಿ,ಸಂಸಾರವನ್ನು ಕಾಪಾಡುವವಳು ಹೆಣ್ಣು,ಈ ರಾಜ್ಯವನ್ನು ಕಾಪಾಡುತ್ತಿರುವುದು ಹೆಣ್ಣು ದೇವತೆಗಳು, ಸ್ತ್ರೀ ಶಕ್ತಿಯೇ ನಮ್ಮ ಕರ್ನಾಟಕದ ಶಕ್ತಿ ಎಂದು ಬಣ್ಣಿಸಿದರು.

ಕಳೆದ ವರ್ಷ ದಸರಾ ಉದ್ಘಾಟನೆ ವೇಳೆ ಮಳೆ ಚೆನ್ನಾಗಿ ಬೀಳಲಿ ಎಂದು ಚಾಮುಂಡೇಶ್ವರಿ ಬಳಿ ಬೇಡಿಕೊಂಡಿದ್ದೆವು. ಪ್ರಯತ್ನ ಮಾಡಿ ಸೋಲಬಹುದು, ಆದರೆ ಪ್ರಾರ್ಥನೆ ಮಾಡಿ ಸೋಲಲು ಸಾಧ್ಯವಿಲ್ಲ‌. ಅದರಂತೆ ಉತ್ತಮ ಮಳೆ ಬಂದು ನಾನು ಮತ್ತು ಮುಖ್ಯಮಂತ್ರಿ ಇಬ್ಬರೂ ರಾಜ್ಯದ ನಾಲ್ಕು ಅಣೆಕಟ್ಟುಗಳಿಗೆ ಬಾಗಿನ ಅರ್ಪಿಸಿದ್ದೇವೆ ಎಂದು ತಿಳಿಸಿದರು.

ದುಃಖದಿಂದ ನಮ್ಮನ್ನು ದೂರ ಮಾಡುವವಳು ದುರ್ಗಾ ದೇವಿ. ಚಾಮುಂಡೇಶ್ವರಿಯ ಆಶೀರ್ವಾದದಿಂದ ತಾಯಂದಿರು, ರೈತರು ಮತ್ತು ರಾಜ್ಯದ ಜನ ಸಂತೋಷವಾಗಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಬಂದು ಕಳೆದ ವರ್ಷ ದೇವಿಗೆ ಗೃಹಲಕ್ಷ್ಮಿ ಹಣದ 2 ಸಾವಿರ ಹಾಗೂ ಒಂದು ವರ್ಷದ ಹಣವನ್ನು ಕಾಣಿಕೆ ಸಲ್ಲಿಸಿದ್ದೆವು ಎಂದು ಹೇಳಿದರು.

ನವರಾತ್ರಿ ಎಂದರೆ ಒಂಬತ್ತು ದಿನ. ಈ ಒಂಬತ್ತು ದಿನವೂ ದೇವಿಯ ನಾನಾ ಅವತಾರಗಳನ್ನು ಪೂಜೆ ಮಾಡುತ್ತೇವೆ. ನವ ದುರ್ಗೆಯರ ಶಕ್ತಿ ಮುಂದಿನ 9 ವರ್ಷಗಳ ಕಾಲ ನಮ್ಮ ಸರ್ಕಾರದ ಮೇಲೆ ಇರುತ್ತದೆ ಎಂಬುದು ನನ್ನ ಅಚಲ ನಂಬಿಕೆ ಎಂದು ಡಿಕೆಶಿ ತಿಳಿಸಿದರು.

ಮೈಸೂರಿನಲ್ಲಿ ಚಾಮುಂಡೇಶ್ವರಿ, ಉತ್ತರ ಕರ್ನಾಟಕದಲ್ಲಿ ಬನಶಂಕರಿ, ಕರಾವಳಿಯಲ್ಲಿ ದುರ್ಗಾಪರಮೇಶ್ವರಿ, ಮಲೆನಾಡಿನಲ್ಲಿ ಸಿಗಂದೂರೇಶ್ವರಿ, ಬೆಂಗಳೂರಿನಲ್ಲಿ ಅಣ್ಣಮ್ಮ , ನಮ್ಮ ಊರಿನಲ್ಲಿ ಕೆಂಕೇರಮ್ಮ, ಕಬ್ಬಾಳಮ್ಮ ಹೀಗೆ ರಾಜ್ಯದ ಅಷ್ಟ ದಿಕ್ಕುಗಳಲ್ಲೂ ನೆಲೆಸಿರುವ ತಾಯಂದಿರು ನಮ್ಮನ್ನು ಕಾಪಾಡುತ್ತಿದ್ದಾರೆ ಎಂದು ಹೇಳಿದರು.

ಗುರು ಸಮಾನರಾದ ಹಂಪ ನಾಗರಾಜಯ್ಯ ಅವರು ನನಗೆ ಕಳೆದ 55 ವರ್ಷಗಳಿಂದಲೂ ಚಿರಪರಿಚಿತರು. ಅವರ ಮಗ ಹರ್ಷ ಮತ್ತು ನಾನು ಸಹಪಾಠಿಗಳು. ನಾಗರಾಜಯ್ಯ ಅವರಿಗೆ ಶಕ್ತಿಯಾಗಿದ್ದ ಪತ್ನಿ ಕಮಲಾ ಹಂಪನಾ ಅವರ ಅನುಪಸ್ಥಿತಿ ಕಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.