ಬೆಂಗಳೂರು: ಬಿಜೆಪಿಯವರು ಸರ್ವಾಧಿಕಾರ ಧೋರಣೆಯ ಮೇಲೆ ನಂಬಿಕೆಯಿರಿಸಿದ್ದು, ಸಂವಿಧಾನ ಬದಲಾವಣೆ ಮಾಡುವ ಒಳಸಂಚನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ,ಸಂಸದ ಅನಂತಕುಮಾರ್ ಹೆಗಡೆಯವರು ಸಂವಿಧಾನ ಬದಲಾವಣೆಯ ಬಗ್ಗೆ ಪುನ: ಹೇಳಿಕೆ ನೀಡಿದ್ದರು, ಕೇಂದ್ರ ಸಚಿವರಾಗಿದ್ದಾಗಲೂ ಈ ಮಾತನ್ನು ಹೇಳಿದ್ದರು ಇದು ಬಿಜೆಪಿಯ ಒಳಸಂಚಾಗಿದೆ ಎಂದು ದೂರಿದರು.
ಸಂವಿಧಾನದ ಬಗ್ಗೆ ಅನಗತ್ಯವಾಗಿ ಮಾತಾನಾಡಿದ್ದಾರೆ,ಸಂವಿಧಾನದಲ್ಲಿ ಯಾವುದೇ ರೀತಿಯ ಬದಲಾವಣೆಯನ್ನು ತರಬೇಕಾದರೆ ಸರ್ಕಾರಕ್ಕೆ ಮೂರಕ್ಕೆ ಎರಡರಷ್ಟು ಬಹುಮತವಿರಬೇಕು. ಬಿಜೆಪಿಯವರಿಗೆ ದೇಶ ಹಾಗೂ ಬಡವರ ಏಳಿಗೆಗೆ ಬಹುಮತ ಬೇಕಾಗಿಲ್ಲ, ಬದಲಾಗಿ ಸಂವಿಧಾನ ಬದಲಾಯಿಸಲು ಬಹುಮತ ಬೇಕಾಗಿದೆ ಎಂದು ಟೀಕಿಸಿದರು.
ಮನುಸ್ಮೃತಿಗೆ ಅನುಗುಣವಾಗಿ ಸಂವಿಧಾನವಿರಬೇಕೆಂಬುದು ಬಿಜೆಪಿಯ ಒಳಸಂಚು. ಆದ್ದರಿಂದ ಇಡೀ ದೇಶದ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರು ಬಿಜೆಪಿಯ ಈ ಯೋಚನೆಯನ್ನು ವಿರೋಧಿಸಬೇಕು ಎಂದು ಸಿಎಂ ಕರೆ ನೀಡಿದರು.
ಒಂದು ವೇಳೆ ಸಂವಿಧಾನ ಬದಲಾವಣೆ ಮಾಡಿದರೆ, ಈ ದೇಶದಲ್ಲಿ ರಕ್ತಪಾತವಾಗುತ್ತದೆ, ನರೇಂದ್ರ ಮೋದಿಯವರು ತಮ್ಮ ಯೋಚನೆಯನ್ನು ಅನಂತಕುಮಾರ್ ಅವರ ಮೂಲಕ ಹೇಳಿಸುತ್ತಿದ್ದಾರೆ ಎಂದು ಟೀಕಿಸಿದರು.
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೇ ಪಟ್ಟಿ ಬಿಡುಗಡೆಯ ಬಗ್ಗೆ ಪ್ರತಿಕ್ರಿಯೆ ನೀಡಿ, ಇಂದು ಸ್ಕ್ರೀನಿಂಗ್ ಸಮಿತಿಯ ಸಭೆ ನಡೆಯುತ್ತಿದ್ದು, ಶಿಫಾರಸ್ಸುಗಳನ್ನು ಮಾಡಲಾಗುವುದು. ಇದರ ಬಗ್ಗೆ ತೀರ್ಮಾನವನ್ನು ರಾಷ್ಟ್ರೀಯ ಚುನಾವಣಾ ಸಮಿತಿಯು ಕೈಗೊಳ್ಳುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.