ಜಿ-20 ಸಮ್ಮೇಳನದಲ್ಲಿ ಉಕ್ರೇನ್ – ರಷ್ಯಾ ಸಂಘರ್ಷದ ಬಗ್ಗೆ ಮೋದಿ ಪ್ರಸ್ತಾಪ

ಬಾಲಿ: ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ಕುರಿತು ಜಿ-20 ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಪ್ರಸ್ತಾಪ ಮಾಡಿದ್ದಾರೆ.

ಶಾಂತಿ ಪಾಲನೆಗಾಗಿ ಕದನ ವಿರಾಮ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳಬೇಕೆಂದು ಸಲಹೆ ನೀಡಿದ್ದಾರೆ.

ಇದೇ ವೇಳೆ ರಷ್ಯಾ ಮೇಲೆ ವಿಧಿಸಲಾಗಿರುವ ಹಲವು ನಿರ್ಬಂಧಗಳ ಕುರಿತು ಮೋದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಕೋವಿಡ್-19, ಉಕ್ರೇನ್ ಬೆಳವಣಿಗೆಗಳು ಮತ್ತು ಜಾಗತಿಕ ಸಮಸ್ಯೆಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

ಡಿಸೆಂಬರ್ 1ರಿಂದ ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸುತ್ತಿರುವುದನ್ನು ಕೂಡಾ ಪ್ರಧಾನಿ ಪ್ರಸ್ತಾಪಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬುದ್ದ, ಗಾಂಧಿ ಅವರ ಪವಿತ್ರ ನೆಲದಲ್ಲಿ ನಾವು ಭೇಟಿ ಮಾಡುತ್ತೇವೆ. ವಿಶ್ವ ಶಾಂತಿಗಾಗಿ ಪ್ರಬಲ ಸಂದೇಶವನ್ನು ರವಾನೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮ್ಮೇಳನದಲ್ಲಿ ಪ್ರಧಾನಿಯವರು ಆಹಾರ ಮತ್ತು ಇಂಧನ ಭದ್ರತೆ ಕುರಿತು ಆದ್ಯತೆ ಮೇರೆಗೆ ಚರ್ಚೆ ಮಾಡಿದ್ದಾರೆ.

ಜಾಗತಿಕ ಸಮಸ್ಯೆಗಳಿಂದಾಗಿ ಆರ್ಥಿಕ ದುರ್ಬಲ ನಾಗರಿಕರಿಗೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಲಭ್ಯತೆಯಲ್ಲಿ ಹಿನ್ನಡೆಯಾಗುತ್ತಿದೆ. ಇದು ಪ್ರತಿಯೊಂದು ದೇಶವನ್ನು ಕಾಡುತ್ತಿದೆ ಎಂದಿದ್ದಾರೆ.

ಭಾರತ ವಿಶ್ವದಲ್ಲೇ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶ.ಹಾಗಾಗಿ ಇಂಧನ ಭದ್ರತೆ ಅತಿಮುಖ್ಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಾರುಕಟ್ಟೆಯಲ್ಲಿ ಇಂಧನ ಸರಬರಾಜು ಮತ್ತು ಸ್ಥಿರತೆಗೆ ಅಡ್ಡಿಯಾಗುವಂತಹ ಯಾವುದೇ ನಿರ್ಬಂಧಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಜಾಗತಿಕ ನಾಯಕರ ಮುಂದೆ ಮೋದಿ ಸ್ಪಷ್ಟವಾಗಿ ಹೇಳಿದ್ದಾರೆ.

ಪ್ರಧಾನಿ ರಿಷಿ ಸುನಕ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾರ್ವೋ ಮತ್ತಿತರರು ಭಾಗವಹಿಸಿದ್ದರು.

ರಷ್ಯಾದಿಂದ ಇಂಧನ ಹಾಗೂ ಅನಿಲ ಖರೀದಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿವೆ.

ಈ ಹಿನ್ನೆಲೆಯಲ್ಲಿ ಮೋದಿ ಅವರು ನಿರ್ಬಂಧಗಳಿಗೆ ವಿರೋಧ ವ್ಯಕ್ತಪಡಿಸುವುದಾಗಿ ಒತ್ತಿ ಹೇಳಿದ್ದಾರೆ.

ರಷ್ಯಾವು ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಜಾಗತಿಕವಾಗಿ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರಲು ಆರಂಭಿಸಿದವು.

ಆದರೆ ಭಾರತ ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ರಷ್ಯಾದಿಂದ ರಿಯಾಯ್ತಿ ದರದಲ್ಲಿ ಇಂಧನವನ್ನು ಖರೀದಿಸಿದೆ.