ಮುಂಬೈ, ಫೆ: ಬಾಲಿವುಡ್ ನ ಖ್ಯಾತ ಸಂಗೀತ ನಿರ್ದೇಶಕ, ಸಂಗೀತ ಸಂಯೋಜಕ ಹಾಗೂ ಗಾಯಕ ಬಪ್ಪಿ ಲಹರಿ ಮುಂಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರಿಗೆ 69 ವರ್ಷ ವಯಸ್ಸಾಗಿತ್ತು.ಬಾಲಿವುಡ್ ಮಂದಿ ಅವರನ್ನು ಪ್ರೀತಿಯಿಂದ ಬಪ್ಪಿದಾ ಎಂದೇ ಕರೆಯುತ್ತಿದ್ದರು.
ಮಂಗಳವಾರ ರಾತ್ರಿ ಬಪ್ಪಿ ಲಹರಿ ಅವರ ಆರೋಗ್ಯ ಹಠಾತ್ ಹದಗೆಟ್ಟಿತು. ಜುಹುವಿನ ಕ್ರಿಟಿ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ವೈದ್ಯರು ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ ಬುಧವಾರ ಬೆಳಿಗ್ಗೆ ಅವರು ನಿಧನರಾಗಿದ್ದಾರೆ.
ಬಪ್ಪಿ ಲಹರಿ ಕೆಲಕಾಲ ಅನಾರೋಗ್ಯದಿಂದ ಬಳಲುತ್ತಿದ್ದರು. ಕಳೆದ ವರ್ಷವಷ್ಟೇ ಕೊರೋನಾದ ಸೌಮ್ಯ ಲಕ್ಷಣಗಳು ಅವರಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಗ ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ವೈದ್ಯರು ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು.
ಬಪ್ಪಿ ಲಹರಿ ಬಾಲಿವುಡ್‌ಗೆ ಅನೇಕ ಹಿಟ್ ಹಾಡುಗಳನ್ನು ನೀಡಿದ್ದಾರೆ. ಅವರ ನಿಜವಾದ ಹೆಸರು ಅಲೋಕೇಶ್ ಲಾಹಿರಿ. 27 ನವೆಂಬರ್ 1952 ರಂದು ಪಶ್ಚಿಮ ಬಂಗಾಳದ ಜಲ್ಪೈಗುರಿಯಲ್ಲಿ ಜನಿಸಿದ ಬಪ್ಪಿದಾ ಅವರ ತಂದೆಯ ಹೆಸರು ಅಪರೇಶ್ ಲಹರಿ ಮತ್ತು ತಾಯಿಯ ಹೆಸರು ಬನ್ಸಾರಿ ಲಹರಿ.
ಹಿಂದಿ,ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಿಗೆ ಬಪ್ಪಿ ಲಹರಿ ಸಂಗೀತ ಸಂಯೋಜನೆ ಮಾಡಿದ್ದರು.
ಬಪ್ಪಿ ಧರಿಸುತ್ತಿದ್ದ ಆಭರಣಗಳಿಂದಲೂ ಹೆಸರುವಾಸಿಯಾಗಿದ್ದರು.
ಬಪ್ಪಿದಾ ನಿಧನಕ್ಕೆ ಬಾಲಿವುಡ್,ಸ್ಯಾಂಡಲ್ ವುಡ್ ಸಂಗೀತ ಸಂಯೋಜಕರು, ನಟ,ನಟಿಯರು ಉದ್ಯಮಿಗಳು,ಕಲಾವಿದರು ಹಾಗೂ ಅವರ ಸಾವಿರಾರು ಅಭಿಮಾನಿಗಳು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.