ಬೆಂಗಳೂರು: ರಾಜ್ಯದಲ್ಲಿ ಕೊರೊನ ಪ್ರಕರಣಗಳು ತೀವ್ರವಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಮನವಿ ಮಾಡಿದ್ದಾರೆ.
ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಅವರು, ಜನರಿಗೆ ತೊಂದರೆ ಕೊಟ್ಟು ನಾವು ಲಾಕ್‍ಡೌನ್ ಮಾಡಬೇಕಾದ ಅಗತ್ಯವಿಲ್ಲ ಎಂದು ಹೇಳಿದರು.
ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಸಭೆ ನಡೆಸಿದಾಗ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ಜೀವ ನಮ್ಮ ಕೈಯಲ್ಲೇ ಇದೆ. ಇದಕ್ಕೆ ಜನರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಈಗಿರುವ ನಿಯಮಗಳನ್ನು ಬದಲಾವಣೆ ಮಾಡುವುದಿಲ್ಲ. ಸಡಿಲವನ್ನೂ ಸಹ ಮಾಡುವುದಿಲ್ಲ. ಬಿಗಿಯಾದ ಕ್ರಮಗಳು ಮುಂದುವರೆಯುತ್ತವೆ. ಲಾಕ್‍ಡೌನ್ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.
ಒಂದು ಮತ್ತು ಎರಡನೆ ಅಲೆ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಎಷ್ಟು ತೊಂದರೆಯಾಗಿದೆ ಎಂಬುದು ನಮಗೂ ಗೊತ್ತು. ಕೆಲವು ಸಂದರ್ಭಗಳಲ್ಲಿ ಕೊರೊನಾ ನಿಯಂತ್ರಿಸಲು ಕಠಿಣವಾದ ನಿಯಮಗಳು ಅನಿವಾರ್ಯ ಎಂದು ತಿಳಿಸಿದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಜನರು ನಮ್ಮೊಂದಿಗೆ ಕೈ ಜೋಡಿಸಬೇಕು. ಮಾಸ್ಕ್ ಇಲ್ಲದೆ ಓಡಾಡಬೇಡಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಸಚಿವರು ಸಲಹೆ ಮಾಡಿದರು.
ನಾವು ಕಾಂಗ್ರೆಸ್ ನವರ ಪಾದಯಾತ್ರೆ ತಡೆಯಲು ಯಾವುದೇ ಷಡ್ಯಂತ್ರ ನಡೆಸಲಿಲ್ಲ ಎಂದು ಇದೇ ವೇಳೆ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದರು.
ಮೊದಲನೆಯದಾಗಿ ಕೋವಿಡ್ ಸಂದರ್ಭದಲ್ಲಿ ಪಾದಯಾತ್ರೆ ಮಾಡಿದ್ದೇ ಮಹಾತಪ್ಪು ಎಂದರು.
ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡಲು ಹೊರಟರು. ಆದರೆ, ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು ಎಂದು ವ್ಯಂಗ್ಯವಾಡಿದರು.
ಮೇಕೆದಾಟು ಉದ್ದೇಶವೇ ಜನರಿಗೆ ಅನುಕೂಲವಾಗಬೇಕೆಂಬುದು. ಆದರೆ, ಕಾಂಗ್ರೆಸ್ ನಾಯಕರು ಇದನ್ನು ಸಹ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ತಮಗೆ ಲಾಭವಾಗಲಿ ಎಂಬುದು ಅವರ ದುರಾಲೋಚನೆಯಾಗಿತ್ತು. ಇದು ನಾಚಿಕೆಗೇಡು ಎಂದು ಟೀಕಿಸಿದರು.
ಕೋವಿಡ್ ನಿಯಮ ಉಲ್ಲಂಘಿಸಿದ ಎಂ.ಪಿ.ರೇಣುಕಾಚಾರ್ಯ ಮೇಲೆ ಎಫ್‍ಐಆರ್ ಹಾಕಲಾಗಿದೆಯೇ ಎಂಬ ಪ್ರಶ್ನೆಗೆ ಕಾಯ್ದೆ ಎಲ್ಲರಿಗೂ ಒಂದೇ. ಇಲ್ಲಿ ಯಾರೊಬ್ಬರೂ ದೊಡ್ಡವರಲ್ಲ ಎಂದು ಸ್ಪಷ್ಟಪಡಿಸಿದರು.