ಡಾ. ಗುರುಪ್ರಸಾದ ಎಚ್. ಎಸ್.
ಲೇಖಕರು ಮತ್ತು ಉಪನ್ಯಾಸಕರು
dr.guruhs@gmail.com
ಭಾರತೀಯ ಕಮ್ಯಾಂಡೋಗಳು ಪಿಒಕೆಗೆ ನುಗ್ಗಿ ಉಗ್ರರ ಶಿಬಿರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸಿ 30ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದು ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಭಾರತದ ಸಾಮರ್ಥ್ಯ ವನ್ನು ಜಗತ್ತಿಗೆ ತೋರಿಸಿದ ದಿನವಿಂದು.
ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದೊಳಗೆ ನುಗ್ಗಿ ಭಯೋತ್ಪಾದಕರನ್ನು ಹತ್ಯೆಗೈದು ಪರಾಕ್ರಮ ಮೆರೆದಿದ್ದ ಸೈನಿಕರ ಶೌರ್ಯ-ಸಾಹಸವನ್ನು ಶಾಶ್ವತವಾಗಿರಸಲು ಈ ದಿನವನ್ನು (ಸೆ. 29) ಸರ್ಜಿಕಲ್ ಸ್ಟ್ರೈಕ್ ದಿನವನ್ನಾಗಿ ಆಚರಿಸಲಾಗುತ್ತದೆ.
ಅದು ಜಮ್ಮು ಕಾಶ್ಮೀರದ ಸೇನಾ ಉರಿ ನೆಲೆಯ ಮೇಲೆ 2016ರ ಸೆಪ್ಟೆಂಬರ್ 18ರಂದು ಉಗ್ರರು ಆತ್ಮಾಹುತಿ ದಾಳಿ ನಡೆಸಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದ್ದರು. ಹಠಾತ್ ದಾಳಿ ನಡೆಸಿ 19 ಭಾರತೀಯ ಯೋಧರನ್ನು ಬಲಿ ಪಡೆದಿದ್ದರು. ಈ ದಾಳಿಯಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ಥಾನದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿತ್ತು. ಭಾರತೀಯ ಸೇನೆ ಮೇಲೆ ನಡೆದ ಅತ್ಯಂತ ಘೋರ ದಾಳಿಗಳಲ್ಲಿ ಇದು ಒಂದಾಗಿತ್ತು.
ಪ್ರತೀಕಾರದ ಹೆಜ್ಜೆ
ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಐತಿಹಾಸಿಕ ಸರ್ಜಿಕಲ್ ದಾಳಿ ನಡೆಸಿ, ಆ ಮೂಲಕ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿ ಇಡೀ ವಿಶ್ವಕ್ಕೆ ಭಾಋತೀಯ ಸೇನೆಯ ಶಕ್ತಿ ಸಾಮಾರ್ಥ್ಯವನ್ನು ತೋರಿಸಿಕೊಡಲು ಮುಂದಾಗಿತು.
ಭಾರತ ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದೊಳಗೆ ನುಸುಳಲು ಉಗ್ರರು 7 ನೆಲೆಗಳನ್ನು ಸ್ಥಾಪಿಸಿ ಸನ್ನದ್ಧರಾಗಿದ್ದರು. ಇದರ ಖಚಿತ ಮಾಹಿತಿ ಪಡೆದ ಗುಪ್ತಚರ ಇಲಾಖೆ ಸೇನೆಗೆ ಮಾಹಿತಿ ರವಾನಿಸಿತ್ತು. ನಂತರದಲ್ಲಿ ಕಾರ್ಯಾಚರಣೆಗಿಳಿದ ಸೇನೆ ಉಗ್ರರ ಮೇಲೆ ದಾಳಿ ನಡೆಸಲು ಕರಾರುವಕ್ಕಾದ ಯೋಜನೆ ತಯಾರಿಸಿ, ಗುಪ್ತ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಸಂದೇಶ ರವಾನಿಸಿತ್ತು.
ಮಧ್ಯರಾತ್ರಿ ಸುಮಾರು 12 ಗಂಟೆಗೆ ದಾಳಿ ಮಾಡಲು ನಿರ್ಧರಿಸಿ, ಗಡಿ ನಿಯಂತ್ರಣ ರೇಖೆಯ ಬಳಿ ಭಾರತೀಯ ಸೈನಿಕರನ್ನು ವಿಮಾನದ ಮೂಲಕ ಇಳಿಸಲಾಗಿತ್ತು. ಗಡಿ ನಿಯಂತ್ರಣಾ ರೇಖೆಯಿಂದ 500 ಮೀಟರ್ ನಿಂದ ಹಿಡಿದು 2 ಕಿ. ಮೀ ವರೆಗೂ ಗುರುತಿಸಲಾಗಿದ್ದ 7 ಭಯೋತ್ಪಾದನಾ ಕ್ಯಾಂಪ್ ನ ಮೇಲೆ ಸೈನಿಕರು ಮುಗಿಬಿದ್ದಿದ್ದರು. ನಾಲ್ಕು ಗಂಟೆಯ ಸತತ ಕಾರ್ಯಾಚರಣೆಯಲ್ಲಿ ಉಗ್ರರ 7 ಬಂಕರ್ ಗಳನ್ನು ಧ್ವಂಸ ಮಾಡಲಾಗಿತ್ತು. ಬೆಳಗ್ಗೆ 4:30ಕ್ಕೆ ಸರ್ಜಿಕಲ್ ದಾಳಿ ಮುಕ್ತಾಯವಾಗಿತ್ತು. ದಾಳಿ ನಡೆಸಿದ ನಂತರ ಯೋಧರು ಸುರಕ್ಷಿತವಾಗಿ ಮರಳುವುದು ಕಾರ್ಯಾಚರಣೆಯ ಅತ್ಯಂತ ಕಠಿಣ ಭಾಗವಾಗಿತ್ತು.
ಆ ಐದು ಗಂಟೆಗಳ ಯುದ್ಧ…
ಸರ್ಜಿಕಲ್ ಸ್ಟ್ರೈಕ್ ಎಂದರೆ ಹೇಳಿದಷ್ಟು ಸುಲಭವಾಗಿರಲಿಲ್ಲ. ಅಲ್ಲಿ ಅಡಿಗಡಿಗೂ ಸವಾಲುಗಳಿದ್ದವು. ಒಂದು ಚೂರು ಹೆಚ್ಚು ಕಡಿಮೆ ಆದರೂ ಭಾರತೀಯ ಯೋಧರ ಪ್ರಾಣಕ್ಕೆ ಕುಂದು ಬರುವ ಸಾಧ್ಯತೆ ಇತ್ತು.
ಏನೋ ಮಾಡಲು ಹೋಗಿ ಏನೋ ಆಗುವ ಸಾಧ್ಯತೆ ಇತ್ತು. ಒಂದು ವೇಳೆ ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತೀಯ ಸೇನೆ ನಮ್ಮ ಗಡಿಯೊಳಗೆ ಬಂದಾಗಿದೆ ಎಂದು ಸಣ್ಣ ಸುಳಿವು ಕೂಡ ಪಾಕಿಗಳಿಗೆ ಸಿಕ್ಕಿದರೆ ಅಲ್ಲಿ ಆಗಬಹುದಾದ ಘಟನೆ ಬೇರೆ ಇತ್ತು. ಆದರೆ ನಮ್ಮ ಅದೃಷ್ಟಕ್ಕೆ ನಮ್ಮ ವಿರುದ್ಧ ಯಾವುದೇ ಪ್ರತಿರೋಧ ಪಾಕ್ ಸೇನೆಯಿಂದ ಕಂಡು ಬಂದಿರಲಿಲ್ಲ. ಯಾಕೆಂದರೆ ಯಾವುದೇ ಒಂದು ಸಣ್ಣ ಸುಳಿವು ಕೂಡ ಪಾಪಿಗಳಿಗೆ ಸಿಕ್ಕಿರಲಿಲ್ಲ. ಅದಕ್ಕೆ ಮುಖ್ಯ ಕಾರಣ ನಮ್ಮ ಸೈನದ ತಯಾರಿ ಹಾಗಿತ್ತು.
ನಮ್ಮ ಸೈನ್ಯ ಸೂಕ್ಷ್ಮ ವಿಷಯಕ್ಕೂ ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿತ್ತು. ಯಾವ ವಿಷಯವನ್ನು ಸೈನ್ಯ ಹೆಚ್ಚು ಆದ್ಯತೆಯನ್ನಾಗಿ ತೆಗೆದುಕೊಂಡಿತ್ತು ಎನ್ನುವುದರ ಬಗ್ಗೆ ಲೆಫ್ಟಿನೆಂಟ್ ಜನರಲ್ ನಿಂಬೋರ್ಕರ್ ಹೇಳುತ್ತಾರೆ, ಕೇಳಿ.
ಇವರು ಸರ್ಜಿಕಲ್ ಸ್ಟ್ರೈಕ್ ನ ಗೆಲುವಿನ ರೂಪುರೇಶೆ ಸಿದ್ಧಪಡಿಸಿದ ತಂಡದ ಸಕ್ರಿಯ ಸದಸ್ಯರಾಗಿದ್ದರು. ಪಾಕ್ ಗಡಿಯೊಳಗೆ ಪ್ರವೇಶಿಸಿದಾಗ ಪಾಕಿಗಳಿಗಿಂತ ಅಲ್ಲಿನ ನಾಯಿಗಳನ್ನು ಎದುರಿಸುವುದು ಮೊದಲ ಸವಾಲಾಗಿತ್ತು. ಸರ್ಜಿಕಲ್ ಸ್ಟ್ರೈಕ್ ಮಾಡಲು ಹೊರಟಾಗ ಗಡಿಯಲ್ಲಿ ನಾಯಿಗಳ ಸಂಖ್ಯೆ ವಿಪರೀತವಾಗಿರುತ್ತದೆ ಎನ್ನುವ ವಿಷಯ ನಮ್ಮ ಸೈನ್ಯದ ಹಿರಿಯರಿಗೆ ಗೊತ್ತಿತ್ತು. ಭಾರತೀಯ ಯೋಧರು ಪಾಕ್ ಗಡಿಯೊಳಗೆ ಸುಮಾರು ಐನೂರು ಮೀಟರ್ ನಿಂದ ಮೂರು ಕಿಲೋಮೀಟರ್ ಒಳಗೆ ಹೋಗಬೇಕಾಗುತ್ತದೆ. ಉರಿಯಲ್ಲಿ ಪಾಕಿಗಳ ಭಯೋತ್ಪಾದಕ ಸೈನಿಕರು 17 ಜನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದರಲ್ಲ, ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಭಯೋತ್ಪಾದಕ ಸೈನಿಕರ ರುಂಡ ಉರುಳಿಸಲು ಕೇಂದ್ರದಿಂದ ಸೈನಿಕರಿಗೆ ಅನುಮತಿ ಕೊಡಲಾಗಿತ್ತು.
ಸೆಪ್ಟೆಂಬರ್ 28 ಮತ್ತು 29ರ ನಡುವಿನ ದಿನ ಅದಕ್ಕೆ ನಿಗದಿಗೊಳಿಸಲಾಗಿತ್ತು. ಸರ್ಜಿಕಲ್ ಸ್ಟ್ರೈಕ್ ಮಾಡಲು ಭಾರತೀಯ ಸೇನೆ ನಿಗದಿಪಡಿಸಿದ ಸಮಯ ಮಧ್ಯರಾತ್ರಿ 12.30ರ ನಂತರ ಬೆಳಗ್ಗಿನ ಜಾವ 4:30ರ ಒಳಗೆ. ಒಟ್ಟು ಐದು ಗಂಟೆಯ ದೀರ್ಘ ಕದನ ಎಂದರೂ ತಪ್ಪಾಗಲಿಕ್ಕಿಲ್ಲ. ಅದರಲ್ಲಿ ಬರೊಬ್ಬರಿ ನಾಲ್ಕು ಗಂಟೆಯನ್ನು ಪಾಕಿಸ್ತಾನದ ಒಳಗೆನೆ ಕಳೆಯಬೇಕಾಗುತ್ತದೆ. ಅವರ ರಾಷ್ಟ್ರಕ್ಕೆ ನುಗ್ಗಿ ಗರಿಷ್ಟ ಪ್ರಮಾಣದಲ್ಲಿ ಪಾಕಿಗಳ ರುಂಡ ಚೆಂಡಾಡಿ ಬರಲು ಭಾರತೀಯ ಸೇನೆಗೆ ದೊಡ್ಡ ಅಡ್ಡಿಯಾಗಿ ಕಾಣುತ್ತಿದ್ದದ್ದು ನಾಯಿಗಳು.
ಚಿರತೆ ಮೂತ್ರ ಬಳಕೆ
ಪಾಕ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಗೆ ಭಾರತದ ಚಿರತೆಗಳ ಮೂತ್ರ ಬಳಕೆ ಮಾಡಲಾಗಿದೆ.
ನಾಯಿಗಳು ಚಿರತೆಗೆ ಹೆದರುತ್ತವೆ. ನಾಯಿಗಳು ಸಾಮಾನ್ಯವಾಗಿ ರಾತ್ರಿ ಮಲಗುವುದಿಲ್ಲ. ಪಾಕ್ ಗಡಿಯೊಳಗೆ ಭಾರತೀಯ ಸೈನ್ಯ ನುಗ್ಗುವುದು ಹೆಲಿಕಾಪ್ಟರ್ ಮೂಲಕ.
ಭಾರತದ ಎಎಲ್ ಎಚ್ ಯುದ್ಧ ವಿಮಾನಗಳನ್ನು ಬಳಕೆ ಮಾಡುವ ಯೋಜನೆ ರೂಪಿಸಲಾಗಿತ್ತು. ಹೆಲಿಕಾಪ್ಟರ್ ಮೂಲಕ ಅವರ ಗಡಿಯೊಳಗೆ ಹೋಗುವಾಗ ನಮ್ಮ ಸೈನಿಕರ ಮತ್ತು ಪಾಕಿಗಳ ಡೇರೆಗಳ ಮಧ್ಯದಲ್ಲಿ ನಮಗೆ ಸಿಗುವುದು ನಾಯಿಗಳು. ಅವು ಬೊಗಳಲು ಶುರು ಮಾಡಿದರೆ ಆಗ ಇಡೀ ರಣತಂತ್ರವೇ ಹೆಚ್ಚುಕಡಿಮೆಯಾಗುತ್ತದೆ. ಹಾಗಾದರೆ ಏನು ಮಾಡುವುದು. ನಾಯಿಗಳು ಬೊಗಳದ ಹಾಗೆ ಏನು ಮಾಡುವುದು? ಯಾವುದಕ್ಕೆ ನಾಯಿಗಳು ಹೆದರುತ್ತವೆ ಎಂದು ಲೆಕ್ಕ ಹಾಕಿದ ಭಾರತೀಯ ಸೇನೆ ತಮ್ಮೊಂದಿಗೆ ಚಿರತೆಯ ಮೂತ್ರವನ್ನು ತೆಗೆದುಕೊಂಡು ಹೋಗಿತ್ತು.
ನಾಯಿಗಳು ಚಿರತೆಗೆ ಹೆದರುತ್ತವೆ. ಚಿರತೆಯ ಕಣ್ಣಿಗೆ ಬಿದ್ದರೆ ತಮಗೆ ಉಳಿಗಾಲವಿಲ್ಲ ಎನ್ನುವುದು ನಾಯಿಗಳ ಅನುಭವ. ಒಂದು ವೇಳೆ ತಾವು ಹೋಗುವ ದಾರಿಯಲ್ಲಿ ಚಿರತೆಯ ಮೂತ್ರದ ವಾಸನೆ ಸಿಕ್ಕಿದರೆ ನಂತರ ನಾಯಿಗಳು ಅಲ್ಲಿ ಒಂದು ಕ್ಷಣ ಕೂಡ ನಿಲ್ಲುವುದಿಲ್ಲ. ಬಳಿಕ ಆ ಪ್ರದೇಶದಲ್ಲಿ ಅಪ್ಪಿತಪ್ಪಿಯೂ ಕಾಣಿಸುವುದಿಲ್ಲ. ಅದರಂತೆ ಭಾರತೀಯ ಯೋಧರು ಹೆಲಿಕಾಪ್ಟರ್ ಮೂಲಕ ಚಿರತೆಯ ಮೂತ್ರವನ್ನು ತಾವು ಹೋಗುವ ದಾರಿಯುದ್ದಕ್ಕೂ ಸಿಂಪಡಿಸುತ್ತಾ ಹೋಗಿದ್ದಾರೆ. ಪಾಕ್ ನಾಯಿಗಳು ಮೌನಕ್ಕೆ ಶರಣಾಗಿವೆ. ಪಾಕ್ ಸೈನಿಕರನ್ನು ಹಾಗೆ ಸಾವಿನ ಮನೆಯಲ್ಲಿ ಭಾರತೀಯ ಸೇನೆ ಚಿರ ನಿದ್ರೆಯಲ್ಲಿ ಮಲಗಿಸಿ ವಾಪಾಸು ಬಂದಿತು.
ನಮ್ಮ ಸೈನಿಕರು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ರ್ಟೈಕ್ ಆಗಿಯೇ ಇಲ್ಲ, ಇದ್ದರೆ ಸಾಕ್ಷಿ ಕೊಡಿ, ಎಂದು ಕೇಳುವ ಹೀನ ಮನಸ್ಸಿನವರು ಈ ದೇಶದಲ್ಲಿ ಇರುವುದು ನಮ್ಮ ದುರ್ದೈವದ ಸಂಗತಿಯಾಗಿದೆ.
ಸಾಕ್ಷ್ಯವನ್ನು ಕೇಂದ್ರ ಸರಕಾರ ಹೊರಗಡೆ ಹಾಕಿದ ನಂತರ ಸರ್ಜಿಕಲ್ ಸ್ಟ್ರೈಕ್ ನಿಜಕ್ಕೂ ಆಗಿದೆ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳುವಂತಾಯಿತು.
ಪಾಕಿಸ್ತಾನದ ಉಗ್ರರು ನಡೆಸಿದ ಭಯೋತ್ಪಾದನ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಇಂದು ನಾಲ್ಕು ವರ್ಷ ಪೂರ್ಣಗೊಂಡಿದೆ.
ಅಂದು ನಮ್ಮ ಸೇನೆ ಅಕ್ಷರಶಃ ಮಿಂಚಿನ ದಾಳಿ ನಡೆಸಿ ನಮ್ಮ ತಂಟೆಗೆ ಬಂದರೆ ಯಾವ ರೀತಿ ಪಾಠ ಕಲಿಸುತ್ತೇವೆ ಎಂಬುದನ್ನು ತೋರಿಸಿಕೊಟ್ಟಿತು.
ಭಾರತೀಯ ಸೈನ್ಯದ ವೀರರಿಗೆ ನಮ್ಮ ಸಲಾಂ.