ಸೆಲೆಬ್ರಿಟಿಗಳು, ಉದ್ಯಮಿಗಳಿಗೆ ಮಾದಕ ವಸ್ತು ಮಾರಾಟ; 2.51 ಕೋಟಿ ಮೌಲ್ಯದ ಕೊಕೈನ್ ,ಬ್ರೌನ್ ಶುಗರ್ ವಶ

ಬೆಂಗಳೂರು: ಸೆಲೆಬ್ರಿಟಿಗಳು,ಉದ್ಯಮಿಗಳಿಗೆ ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ಪೂರ್ವ ವಿಭಾಗದ ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ‌ 2 ಕೋಟಿ 51 ಲಕ್ಷ ಮೌಲ್ಯದ ಕೊಕೈನ್ ಹಾಗೂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ.

ಒಬ್ಬ ಆರೋಪಿ ಬ್ರೆಜಿಲ್‍ನಿಂದ ಮಾದಕ ವಸ್ತು ಕೊಕೈನ್‍ ಅನ್ನು ಕಳ್ಳಸಾಗಣೆ ಮುಖಾಂತರ ಬೆಂಗಳೂರಿಗೆ ತಂದು ಸೆಲಬ್ರೆಟಿಗಳಿಗೆ ಮಾರಾಟ ಮಾಡುತ್ತಿದ್ದ.

ಈತನನ್ನು ಬಂಧಿಸಿ 1 ಕೋಟಿ 30 ಲಕ್ಷ ಮೌಲ್ಯದ 910 ಗ್ರಾಂ ಕೊಕೈನ್ ವಶಪಡಿಸಿಕೊಂಡಿದ್ದಾರೆ.

ಈತ ಬೆಂಗಳೂರಿಗೆ ತಂದು ನಗರದಲ್ಲಿ ವಾಸವಾಗಿರುವ ನೈಜೀರಿಯಾ ದೇಶದ ಗಿರಾಕಿಗಳಿಗೆ, ಸೆಲಬ್ರೆಟಿಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಾದಕ ವಸ್ತು ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಇನ್ನೊಬ್ಬ ಆರೋಪಿಯನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿ 1 ಕೋಟಿ 21 ಲಕ್ಷ ಮೌಲ್ಯದ 2 ಕೆಜಿ 428 ಗ್ರಾಂ ಬ್ರೌನ್ ಶುಗರ್ ವಶಪಡಿಸಿಕೊಂಡಿದ್ದಾರೆ. 

ಖಚಿತ ಮಾಹಿತಿ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.