ಸೇನಾ ಹೆಲಿಕಾಪ್ಟರ್ ದುರಂತ: ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಸೇನಾಧಿಕಾರಿಗಳ ದುರ್ಮರಣ

ತಮಿಳುನಾಡು: ತಮಿಳುನಾಡು ರಾಜ್ಯದ ಊಟಿ ಸಮೀಪದ  ಕೂನೂರ್ ಬಳಿ ಸೇನಾ ಹೆಲಿಕಾಪ್ಟರ್ ಪತನಗೊಂಡು ರಕ್ಷಣಾ ಪಡೆಗಳ  ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಸೇರಿದಂತೆ ಒಟ್ಟು 13 ಮಂದಿ ಮೃತಪಟ್ಟಿದ್ದಾರೆ.

ಬಿಪಿನ್ ರಾವತ್ ಅವರೊಂದಿಗೆ ಅವರ ಪತ್ನಿ ಮಧುಲಿಕಾ ಮತ್ತು ಸೇನಾಪಡೆಯ ಇತರೆ ಅಧಿಕಾರಿಗಳು ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸುತ್ತಿದ್ದರು.

ರಾವತ್ ಮತ್ತು ಅಧಿಕಾರಿಗಳು ತಮಿಳುನಾಡಿನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಉಪನ್ಯಾಸ ನೀಡಲು ತೆರಳುತ್ತಿದ್ದರು.

ಮಧ್ಯಾಹ್ನ 12.30 ರ ಸಮಯದಲ್ಲಿ ಹೆಲಿಕಾಪ್ಟರ್ ಕೂನೂರು ಬಳಿ ಅಪಘಾತ ವಾಗಿದೆ. ಈ ನತದೃಷ್ಟ ಕಾಪ್ಟರ್ ನಲ್ಲಿ ಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್

ಒಬ್ಬರು ಮಾತ್ರ ಬದುಕುಳಿದಿದ್ದಾರೆ ಆದರೆ ಅವರ ಸ್ಥಿತಿ ಕೂಡಾ ಗಂಭೀರವಾಗಿದೆ. ಅವರಿಗೆ ವೆಲ್ಲಿಂಗ್ಟನ್ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ರಾವತ್ ಮತ್ತು ಅಧಿಕಾರಿಗಳ ನಿಧನದಿಂದ ಇಡೀ ಭಾರತವೇ ಆಘಾತಕ್ಕೆ ಒಳಗಾಗಿದೆ.

1958, ಮಾರ್ಚ್ 16ರಂದು ಉತ್ತರಾಖಂಡ್​ನ ಪೌರಿಯಲ್ಲಿ ಬಿಪಿನ್ ರಾವತ್ ಅವರು ಜನಿಸಿದರು.. ಬಿಪಿನ್ ರಾವತ್ ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಅವರು ಕೂಡ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕಾರ್ಯ ನಿರ್ವಹಣೆ ಮಾಡಿದ್ದರು.

ಡೆಹರಾಡೂನ್ ನ ಕೇಂಬ್ರಿಡ್ಜ್ ಹಾಲ್ ಸ್ಕೂಲ್ನಲ್ಲಿ ಪ್ರಾಥಮಿಕ ಶಿಕ್ಷಣ, ಶಿಮ್ಲಾದ ಸೆಂಟ್.ಎಡ್ವರ್ಡ್ ಸ್ಕೂಲ್ನಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದ ಬಿಪಿನ್ ರಾವತ್ ಅವರು ಡೆಹರಾಡೂನ್ ನಲ್ಲಿ ಮಿಲಿಟರಿ ಅಕಾಡೆಮಿಯಲ್ಲಿ ಸೇರ್ಪಡೆಯಾಗಿ ಸೈನ್ಯದ ಬಗ್ಗೆ ತರಬೇತಿ ಪಡೆದುಕೊಂಡಿದ್ದರು.

1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಂಡ ಬಿಪಿನ್ ರಾವತ್  ಬ್ರಿಗೇಡ್ ಕಮಾಂಡರ್, ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ (ಜಿಒಸಿ-ಸಿ) ಸದರ್ನ್ ಕಮಾಂಡ್, ಮಿಲಿಟರಿ ಕಾರ್ಯಾಚರಣೆ ನಿರ್ದೇಶನಾಲಯದಲ್ಲಿ ಜನರಲ್ ಸ್ಟಾಫ್ ಆಫೀಸರ್ ಗ್ರೇಡ್ 2, ಕರ್ನಲ್ ಮಿಲಿಟರಿ ಕಾರ್ಯದರ್ಶಿ ಮತ್ತು ಉಪ ಮಿಲಿಟರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಮಿಲಿಟರಿ ಕಾರ್ಯದರ್ಶಿಯ ಶಾಖೆ ಮತ್ತು ಜೂನಿಯರ್ ಕಮಾಂಡ್ ವಿಂಗ್‌ನಲ್ಲಿ ಹಿರಿಯ ಬೋಧಕರಾಗಿದ್ದರು.ಯುನೈಟೆಡ್ ನೇಷನ್ಸ್ ಪೀಸ್ ಕೀಪಿಂಗ್ ಫೋರ್ಸ್‌ನ ಭಾಗವಾಗಿದ್ದರು ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಬಹುರಾಷ್ಟ್ರೀಯ ಬ್ರಿಗೇಡ್‌ಗೆ ಕಮಾಂಡರ್ ಆಗಿ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸಿದ್ದರು.  ಮುಂದೆ 2016ರಲ್ಲಿ ಭಾರತೀಯ ಮೂರು ಸೇನಾಪಡೆಗಳ ಮುಖ್ಯಸ್ಥರಾಗಿ ನಿಯೋಜನೆಯ ಗೊಂಡರು..

ಮಧುಲಿಕಾ ರಾವತ್ ಅವರೊಂದಿಗೆ ವಿವಾಹ ಬಂಧನಕ್ಕೆ ಒಳಗಾದ ಬಿಪಿನ್ ರಾವತ್ ಅವರಿಗೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನಿದ್ದಾನೆ.. ಬಿಪಿನ್ ರಾವತ್ ಪತ್ನಿ ಮಧುಲಿಕಾ ರಾವತ್, ಭಾರತೀಯ ಸೈನ್ಯದಲ್ಲಿ ಮಹಿಳಾ ಕಲ್ಯಾಣ ಸಂಘದ ಅಧ್ಯಕ್ಷೆಯಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರು.

ರಾವತ್ ಅವರು ಮಾತ್ರವಲ್ಲದೆ ಅವರ ಇಡೀ ಕುಟುಂಬವೇ ಭಾರತೀಯ ಸೈನ್ಯಕ್ಕೆ ಸೇವೆಸಲ್ಲಿಸಿತ್ತು. ಬಿಪಿನ್ ರಾವತ್ ತಂದೆಯ ಲಕ್ಷ್ಮಣ ಸಿಂಗ್ ರಾವತ್ ಸಹ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಣೆ ಮಾಡಿದರು. ಇಷ್ಟೇ ಅಲ್ಲದೆ ಬಿಪಿನ್ ರಾವತ್ ಅವರ ಚಿಕ್ಕಪ್ಪ ಹರಿನಂದನ್, ಭರತ್ ಸಿಂಗ್ ರಾವತ್ ಅವರು ಭಾರತೀಯ ಸೈನ್ಯದಲ್ಲಿ ಹವಾಲ್ದಾರ್ ಆಗಿ ಕರ್ತವ್ಯ ನಿರ್ವಹಣೆ ಮಾಡಿ ನಿವೃತ್ತಿ ಗೊಂಡಿದ್ದರು.. ಅಲ್ಲದೇ ಇವರ ಮಕ್ಕಳು ಸಹ ಭಾರತೀಯ ಸೈನ್ಯದಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ.

1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್​ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು.

ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು. ಹಲವು ಸೇನಾನುಭವ ಮತ್ತು ಯುದ್ಧಾನುಭವ ಹೊಂದಿರುವ ಬಿಪಿನ್ ರಾವತ್ ಬಗ್ಗೆ ಮೋದಿ ಸರ್ಕಾರ  ಒಲವು ಹೊಂದಿತ್ತು.

ಇದೀಗ ಇಂತಹ ಮಹಾನ್ ನಾಯಕನನ್ನು ಕಳೆದುಕೊಂಡು ಭೂಸೇನೆ,ವಾಯುಸೇನೆ,ನೌಕಾಸೇನೆ ಹಾಗೂ ಇಡೀ ಭಾರತ ದೇಶ ಬಡವಾದಂತಾಗಿದೆ.

ರಾವತ್ ಹಾಗೂ ಅಧಿಕಾರಿಗಳ ದುರಂತ ಸಾವಿಗೆ ದೇಶದ ಜನ ಬೆಚ್ಚಿಬಿದ್ದಿದೆ. ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ, ರಾಜ್ಯ ಸಚಿವರು ಮತ್ತು ನಮ್ಮ ರಾಜ್ಯದ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ತೀವ್ರ ಶೋಕಪಟ್ಟಿದ್ದಾರೆ.