ಶಾಲಾರಂಭ ಮಾಡಿದ್ದು ಒಳ್ಳೆಯದಾಯಿತು…. ಪರೀಕ್ಷೆನೂ ಮಾಡಿ… ಪರೀಕ್ಷೆ ನಡೆಸದಿದ್ದರೆ ಎಬಿಲಿಟಿ ಗೊತ್ತಾಗೋದು ಹೇಗೆ..

ಚಾಮರಾಜನಗರ: ಏನೇ ಆಗಲಿ ನಾವು ಪರೀಕ್ಷೆ ಬರೆಯುತ್ತೇವೆ. ನೀವು ಪರೀಕ್ಷೆ ಮಾಡಲೇಬೇಕು.. ಎಂದು ನೂರಾರು ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯು ತರಗತಿ ಮಕ್ಕಳು ಶಿಕ್ಷಣ ಸಚಿವರ ಬಳಿ ಆಗ್ರಹಿಸಿದರು.
ಮಂಗಳವಾರ ಚಾಮರಾಜನಗರ ಜಿಲ್ಲೆಯ ಹಲವಾರು ಪ್ರೌಢಶಾಲೆಗಳು ಮತ್ತು ಪಿಯು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿದ್ದ ತರಗತಿಗಳಿಗೆ ಭೇಟಿ ನೀಡಿ ಪ್ರತಿಯೊಬ್ಬರ ಬಳಿಯೂ ನಿಂತು ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಮಕ್ಕಳಿಂದ ಪಠ್ಯ ಮತ್ತು ಪಠ್ಯೇತರ ಕುರಿತಾದ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು.
ಶಾಲೆ ಆರಂಭವಾಗಿದ್ದು ಒಳ್ಳೆಯದೋ ಅಥವಾ ಮನೆಯಲ್ಲಿಯೇ ಇನ್ನೂ ಇರಬೇಕೆಂಬ ಆಸೆ ಇತ್ತೇ ಎಂಬ ಪ್ರಶ್ನೆಗೆ ಶಾಲೆ ಇನ್ನೂ ಮೊದಲೇ ಓಪನ್ ಆಗಿದ್ದರೆ ಚೆನ್ನಾಗಿತ್ತು ಸಾರ್… ಈಗಲಾದರೂ ಶಾಲೆ ತೆರೆದಿದ್ದು ನಮಗೆಲ್ಲ ಖುಷಿ ತಂದಿದೆ ಎಂದು ಪ್ರತಿಯೊಬ್ಬರೂ ಉತ್ತರಿಸಿದರು.
ಶಾಲೆಯನ್ನು ಇನ್ನೂ ಮೊದಲೇ ತೆರೆಯಬೇಕೆಂಬುದು ನಮ್ಮ ಉದ್ದೇಶವೂ ಆಗಿತ್ತು. ಆದರೆ ಕೊರೋನಾ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಿರಲಿಲ್ಲ. ನಿಮ್ಮ ಶಿಕ್ಷಣ, ಅಭ್ಯುದಯದಷ್ಟೇ ನಿಮ್ಮ ಆರೋಗ್ಯವೂ ಸರ್ಕಾರಕ್ಕೆ ಮುಖ್ಯವಾದ್ದರಿಂದ ಶಾಲೆ ತೆರೆಯುವುದು ಸ್ವಲ್ಪ ತಡವಾಯಿತು ಎಂದು ಸಚಿವರು ಉತ್ತರಿಸಿದರು.
ಹಾಗೆಯೇ ವಿವಿಧ ಪಠ್ಯದ ಪ್ರಶ್ನೆಗಳನ್ನು ಕೇಳಿದ ಸಚಿವರು ತಮಾಷೆಗಾಗಿ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಇಲ್ಲದೇ ಪಾಸ್ ಮಾಡಿದ್ರೆ ಹೇಗಾಗುತ್ತೆ… ಪರೀಕ್ಷೆಗೆ ಓದೋದು, ಕಷ್ಟಪಡೋದು ತಪ್ಪುತ್ತೆ.. ಏನ್ ಮಾಡೋಣ ಹೇಳಿ, ಪರೀಕ್ಷೆಗಳನ್ನು ಮಾಡದೇ ಎಲ್ಲರನ್ನೂ ಪಾಸ್ ಮಾಡೋಣ ನಿಮಗೆ ಎಲ್ಲರ ಒಪ್ಪಿಗೆ ಇದೆಯೇ ಎಂದು ಪ್ರಶ್ನಿಸಿದಾಗ, ಆ ಕೆಲಸವನ್ನು ಮಾಡಲೇಬೇಡಿ ಸಾರ್. ನಾವು ಪರೀಕ್ಷೆ ಬರೆದೇ ಬರೆಯುತ್ತೇವೆ ಎಂದರು ಎಲ್ಲಾ ವಿದ್ಯಾರ್ಥಿಗಳು.
ಏಕೆ ಪರೀಕ್ಷೆ ಮಾಡಬೇಕೆಂಬ ಸಚಿವರ ಮತ್ತೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಕ್ಕಳು, ಸಾರ್.. ಪರೀಕ್ಷೆ ಮಾಡದೇ ಹೋದರೆ ಕಷ್ಟಪಟ್ಟು ಓದಿದವರು ಮತ್ತು ಓದದವರು ಎಲ್ಲರನ್ನೂ ಒಂದೇ ರೀತಿ ನೋಡಿದಂತಾಗುತ್ತದೆ. ಪರೀಕ್ಷೆ ಮಾಡದೇ ಪಾಸು ಮಾಡಿದರೆ ಯಾರ ಯಾರ ಪ್ರತಿಭೆ, ಸಾಮರ್ಥ್ಯ, ಎಬಿಲಿಟಿ ಎಷ್ಟು ಎಂದು ಗೊತ್ತಾಗುವುದಿಲ್ಲ. ನಮ್ಮ ಎಬಿಲಿಟಿ ನಮಗೆ ಗೊತ್ತಾಗಬೇಕು. ಪ್ರತಿಯೊಬ್ಬರಿಗೂ ಅವರ ಪ್ರತಿಭೆಗೆ ತಕ್ಕಂತೆ ಮಾರ್ಕ್ಸ್ ದೊರೆತರೆ ಸಮಾಧಾನವಾಗುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದರು.
ಹೌದು.. ನಿಮಗೆ ಯಾವುದೇ ರೀತಿಯ ತೊಂದರೆಯಾಗಬಾರದು ಮತ್ತು ನಿಮ್ಮ ಪ್ರತಿಭೆಗೆ ತಕ್ಕ ಅಂಕಗಳನ್ನು ಪಡೆಯಬೇಕೆಂಬ ಉದ್ದೇಶದಿಂದಲೇ ನಮ್ಮ ಸರ್ಕಾರ ಕಳೆದ ವರ್ಷ ಯಾವುದೇ ರಾಜ್ಯಗಳವರೂ ಪರೀಕ್ಷೆ ನಡೆಸದಿದ್ದರೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ನಡೆಸಿತು. ಈ ವರ್ಷವೂ ಪರೀಕ್ಷೆ ಜೂನ್ ತಿಂಗಳಿನಲ್ಲಿ ನಡೆಯುತ್ತದೆ. ನೀವೆಲ್ಲಾ ಚೆನ್ನಾಗಿ ಓದಿ ಪರೀಕ್ಷೆ ಬರೆದು ಹೆಚ್ಚಿನ ಅಂಕಗಳನ್ನು ಗಳಿಸಿ ನಿಮ್ಮ ಶಾಲೆ ಮತ್ತು ನಿಮ್ಮ ಪೆÇೀಷಕರಿಗೆ ಕೀರ್ತಿ ತರಬೇಕು ಎಂದು ಸುರೇಶ್
ಕಳೆದ ವರ್ಷ ಪರೀಕ್ಷೆ ನಡೆಸಿದ್ದರಿಂದ ಅನೇಕರು ತಮ್ಮ ಪ್ರತಿಭೆಗಳನ್ನು ತೋರಿಸಲು ಅವಕಾಶವಾಯಿತು. ಕೂಲಿ ಮಾಡುವವರ ಮಕ್ಕಳು, ಗುಡಿಸಿಲಿನಲ್ಲಿ ವಾಸಿಸುವ ಬಡವರ ಮಕ್ಕಳು ಶೇ. 98ರಿಂದ 100 ಅಂಕಗಳನ್ನು ಗಳಿಸಿದರು ಎಂದು ಸಚಿವರು ಹೇಳಿದರು.
ಪಿಯು ವಿಜ್ಞಾನ ವಿಭಾಗದ ತರಗತಿಗೆ ಭೇಟಿ ನೀಡಿದ ಸಚಿವರು ನೀಟ್ ಪರೀಕ್ಷೆ, ಜೆಇಇ ಪರೀಕ್ಷೆಗಳ ಕುರಿತು ಪ್ರಶ್ನೆಗಳನ್ನು ಕೇಳಿ, ಪಿಯು ಪರೀಕ್ಷೆ ಮಾಡದೇ ಎಲ್ಲರನ್ನೂ ಪಾಸ್ ಮಾಡಿದರೆ ಹೇಗೆಂಬ ಪ್ರಶ್ನೆಗೆ ಉತ್ತರಿಸಿದ ಮಕ್ಕಳು, ಎಲ್ಲರೂ ನೀಟ್ ಮತ್ತು ಜೆಇಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದು. ಹೆಚ್ಚು ಅಂಕ ಗಳಿಸಿದರೆ ಮಾತ್ರವೆ ಸಾಧ್ಯವಾಗುವುದರಿಂದ ನಾವು ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬೇಕಾದರೆ ಪರೀಕ್ಷೆ ಬರೆಯಬೇಕು. ಅದಕ್ಕಾಗಿ ಪರೀಕ್ಷೆ ನಡೆಸಬೇಕು ಎಂದು ಮಕ್ಕಳು ಹೇಳಿದರು.
ಚಾಮರಾಜನಗರ ಜಿಲ್ಲೆಯ ನಲ್ಲೂರು, ನಾಗವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಂದಕವಾಡಿಯ ಸರ್ಕಾರಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಕೆಪಿಎಸ್ ಶಾಲೆ, ರಾಮಸಮುದ್ರದ ಸಿಆರ್ ಬಿಪಿ ಅನುದಾನಿತ ಪ್ರೌಢಶಾಲೆ, ಚಾಮರಾಜನಗರದ ಜೆಎಸ್ ಎಸ್ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜುಗಳಿಗೆ ಭೇಟಿ ನೀಡಿ ಪ್ರತಿಯೊಬ್ಬ ಮಕ್ಕಳನ್ನೂ ವಿಚಾರಿಸಿದರು.