ಶಬರಿಮಲೆ – ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೋವಿಡ್ ಟೆಸ್ಟ್ ಮಾಡಿಸಿ

ದಾವಣಗೆರೆ:ಇತ್ತೀಚೆಗೆ ದಾವಣಗೆರೆ ಜಿಲ್ಲೆಯಿಂದ ಕೇರಳ ರಾಜ್ಯದ ಶಬರಿಮಲೆ ಹಾಗೂ ತಮಿಳುನಾಡಿನ ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೂಡಲೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಮನವಿ ಮಾಡಿದ್ದಾರೆ.

ಕೋವಿಡ್ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಹೊರ ರಾಜ್ಯದಿಂದ ಜಿಲ್ಲೆಗೆ ಆಗಮಿಸಿದವರು, ಅದರಲ್ಲೂ  ಶಬರಿಮಲೆ ಹಾಗೂ ಓಂಶಕ್ತಿ ಯಾತ್ರೆಗೆ ಹೋಗಿಬಂದವರು ಕೂಡಲೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂಚೂಣಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಪೊಲೀಸ್ ಸೇರಿದಂತೆ ಎಲ್ಲಾ ಇಲಾಖೆ ಸಿಬ್ಬಂದಿ, ಕೆಪಿಎಂಇ ಅಡಿ ಬರುವ ಎಲ್ಲ ಸಿಬ್ಬಂದಿಗಳು, ವೈದ್ಯರು, ನರ್ಸ್‍ಗಳು ಸೇರಿದಂತೆ ಎಲ್ಲ ಅರ್ಹ ಫಲಾನುಭವಿಗಳು ಎರಡನೆ ಡೋಸ್ ಪಡೆದು 39 ವಾರಗಳಾಗಿದ್ದಲ್ಲಿ ಕೂಡಲೆ ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಲಸಿಕೆಯನ್ನು ಗ್ರಾಮೀಣ, ನಗರ ಆರೋಗ್ಯ ಕೇಂದ್ರ ಮತ್ತು ಜಿಲ್ಲಾಸ್ಪತ್ರೆಯಲ್ಲಿ ನೀಡಲಾಗುವುದು.

ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳಲ್ಲಿ ಐಎಲ್‍ಐ ಮತ್ತು ಸಾರಿ ಪ್ರಕರಣಗಳು ಕಂಡುಬಂದಲ್ಲಿ ಜಿಲ್ಲಾ ಆಸ್ಪತ್ರೆಯ ಕೊಠಡಿ ಸಂಖ್ಯೆ 02 ರಲ್ಲಿ ಕೋವಿಡ್ ಟೆಸ್ಟ್ ಗೆ ಒಳಪಡಬೇಕು ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್  ಮನವಿ ಮಾಡಿದ್ದಾರೆ.