ಅಹಮದಾಬಾದ್: ಕರ್ನಾಟಕದ ಕೋಲಾರದಲ್ಲಿ ಪ್ರಧಾನಿ ಮೋದಿ ಕುರಿತು ಮಾಡಿದ್ದ ‘ಮೋದಿ ಉಪನಾಮ‘ ಟೀಕೆ ಸಂಬಂಧ ಮಾನನಷ್ಟ ಪ್ರಕರಣದಲ್ಲಿ ಶಿಕ್ಷೆಗೆ ತಡೆ ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿದೆ.
2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸಂಸತ್ ಸದಸ್ಯತ್ವ ಅನರ್ಹಗೊಳಿಸಲು ಕಾರಣವಾದ ತಮ್ಮ ಶಿಕ್ಷೆಗೆ ತಡೆಯಾಜ್ಞೆ ನೀಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ನ ಸೂರತ್ನ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ.
ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ಕಳೆದ ಮಾರ್ಚ್ 23 ರಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ರಾಹುಲ್ ಗಾಂಧಿಯನ್ನು ತಪ್ಪಿತಸ್ಥರೆಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ಆದರೆ, ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಮೂವತ್ತು ದಿನಗಳ ಕಾಲ ಶಿಕ್ಷೆಯನ್ನು ಅಮಾನತು ಮಾಡಿತ್ತು.
ಮರುದಿನ ಮಾರ್ಚ್ 24 ರಂದು ಕೇರಳದ ವಯನಾಡ್ ಸಂಸದರಾಗಿದ್ದ ರಾಹುಲ್ ಗಾಂಧಿ ಅವರ ಸದಸ್ಯತ್ವವನ್ನು ಅನರ್ಹಗೊಳಿಸಲಾಯಿತು.
2019 ರಲ್ಲಿ ಕರ್ನಾಟಕ ಕೋಲಾರದಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ, ರಾಹುಲ್ ಗಾಂಧಿ ಮೋದಿ ಉಪನಾಮವನ್ನು ವ್ಯಂಗ್ಯವಾಡಿದ್ದರು.
ಎಲ್ಲಾ ಕಳ್ಳರು ಮೋದಿ ಎಂಬ ಸಾಮಾನ್ಯ ಉಪನಾಮವನ್ನು ಹೇಗೆ ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಗುಜರಾತ್ನ ಮಾಜಿ ಸಚಿವ ಪೂರ್ಣೇಶ್ ಮೋದಿ ಕ್ರಿಮಿನಲ್ ಮಾನನಷ್ಟ ಪ್ರಕರಣ ದಾಖಲಿಸಿದ್ದರು.