ಮೈಸೂರು: ಮೈಸೂರು ದಸರಾ ಪ್ರಯುಕ್ತ ಆಯೋಜಿಸಿರುವ ಯುವ ದಸರಾದಲ್ಲಿ ಯುವ ಜನತೆ ತಮ್ಮ ಮೆಚ್ಚಿನ ಗೀತೆಗಳಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಈ ಬಾರಿ ಮೈಸೂರು ನಗರದ ಹೊರವಲಯ ಉತ್ತನಹಳ್ಳಿಯಲ್ಲಿ ಯುವ ದಸರಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,
ಕನ್ನಡ ಚಲಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಹೆಚ್ ಸಿ ಮಹದೇವಪ್ಪ ಅವರು ಮೈಸೂರು ದಸರಾ ಕಾರ್ಯಕ್ರಮಕ್ಕೆ ಆಗಮಿಸಿರುವ ವಿವಿಧ ರಾಷ್ಟ್ರ ರಾಜ್ಯ ಜಿಲ್ಲೆಯ ಜನತೆಗೆ ದಸರಾ ಶುಭಾಶಯಗಳನ್ನು ತಿಳಿಸಿದರು ಜತೆಗೆ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಜಿ.ಟಿ ದೇವೇಗೌಡ ವಹಿಸಿದ್ದರು.
ಯುವ ದಸರಾ ಕಾರ್ಯಕ್ರಮದಲ್ಲಿ ಮೊದಲು ಕೆ.ಜಿ.ಎಫ್ ಚಿತ್ರದ ನಾನು ಬಳ್ಳಿಯ ಮಿಂಚು, ರಾಬರ್ಟ್ ಚಿತ್ರದ ಬೇಬಿ ಡ್ಯಾನ್ಸ್ ಫ್ಲೋರ್ ರೆಡಿ, ಸುಂಟರಗಾಳಿ ಚಿತ್ರದ ಗೀತೆ ಹೀಗೆ ಹಲವು ಗೀತೆಗಳಿಗೆ ಜಾನ್ವಿ ರಾಯಲ್ ಮತ್ತು ತಂಡ ಕುಣಿದು ಕುಪ್ಪಳಿಸಿ ಯುವಕರ ಮೈ ನವಿರೇಳಿಸಿತು.
ಚಿತ್ರರಂಗದ ಟಗರು ಪುಟ್ಟಿ ಖ್ಯಾತಿಯ ಮಾನ್ವಿತಾ ಮತ್ತು ತಂಡ ಭೀಮಾ ಚಿತ್ರದ ಬ್ಯಾಡ್ ಬಾಯ್ಸ್, ಟಗರು ಚಿತ್ರದ ಮೆಂಟಲ್ ಹೋ ಜಾವ, ಕರಟಕ ಧಮನಕ ಚಿತ್ರದ ಹಿತ್ತಲಕ ಕರಿಬೇಡ ಮಾವ ಗೀತೆಗಳಿಗೆ ನೃತ್ಯ ಮಾಡಿ ರಂಜಿಸಿದರು.
ಕನ್ನಡದ ಖ್ಯಾತ ಹಿನ್ನಲೆ ಗಾಯಕ ವಾಸುಕಿ ವೈಭವ್ ಅವರ ತಂಡ ಕಿರಿಕ್ ಪಾರ್ಟಿ ಚಿತ್ರದ ಕಾಗದದ ದೋಣಿಯಲ್ಲಿ ಗೀತೆ ಹಾಡಿದರು.ನಂತರ ಕಾಣದಂತೆ ಮಯವಾದನ್ನು ನಮ್ಮ ಶಿವ ಕೈಲಾಸ ಸೇರಿಕೊಂಡನು ಗೀತೆ ಹಾಡುವ ಮೂಲಕ ಪುನೀತ್ ರಾಜ್ ಕುಮಾರ್ ಅವರನ್ನು ಮೈಸೂರು ಜನತೆಯ ಧ್ವನಿಯಲ್ಲಿ ಜೊತೆಗೂಡಿಸಿದರು, ಬಡವ ರಾಸ್ಕಲ್ ಚಿತ್ರದ ಬಂದು ನಮ್ಮೊನೋ ಕಮಾನ್ ಮ್ಯಾನು ಗೀತೆಯ ಮೂಲಕ ಸ್ನೇಹದ ಶ್ರೀಮಂತಿಕೆಯನ್ನು ಹಂಚಿ ಎಲ್ಲರ ಮೆಚ್ಚುಗೆ ಪಡೆದರು.
ಖ್ಯಾತ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಲ್ ಅವರು ಸುನ್ ರಹಾ ಹೇನ ಗೀತೆ ಮೂಲಕ ಕಾರ್ಯಕ್ರಮವನ್ನು ಆರಂಭಿಸಿದರು.ನಂತರ ಕನ್ನಡದ ಚಕ್ರವರ್ತಿ ಚಿತ್ರದ ಒಂದು ಮಳೆ ಬಿಲ್ಲು, ಕೊಟ್ಟಿಗೊಬ್ಬ ಚಿತ್ರದ ಸಾಲುತಿಲ್ಲವೇ, ಸಂಜು ವೆಡ್ಸ್ ಗೀತಾ ಚಿತ್ರದ ಗಗನವೇ ಬಾಗಿ ಹೀಗೆ ವಿವಿಧ ಕನ್ನಡ ಚಿತ್ರಗೀತೆಗಳು ಹಾಗೂ ಹಿಂದಿ ಚಿತ್ರದ ವಿವಿಧ ಗೀತೆಗಳಿಗೆ ಮೈಸೂರು ಜನತೆ ಕುಣಿದು ಕುಪ್ಪಳಿಸುವಂತೆ ಮಾಡಿದರು.
ಕಾರ್ಯಕ್ರಮದಲ್ಲಿ ಗಾಯಕಿ ಶ್ರೇಯಾ ಘೋಷಾಲ್ ಅವರು ಹಾಡಿದ ಹಿಂದಿ ಚಿತ್ರದ ಗೀತೆಗಳಿಗಿಂತ ಕನ್ನಡ ಚಿತ್ರದ ಗೀತೆಗಳಿಗೆ ಮೈಸೂರಿನ ಸಂಗೀತ ರಸಿಕರು ಫಿದಾ ಆದರು.
ಇದೇ ವೇಳೆ ಜಾನಪದ ಕಲಾತಂಡ ಮತ್ತು ಮಹಿಳೆಯರ ಡೊಳ್ಳು ಕುಣಿತ ಕೂಡಾ ಜನಮನ ಸೂರೆಗೊಂಡಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಭಾರೀ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.