ಬೆಂಗಳೂರು:ಬರುವ ಶುಕ್ರವಾರದತನಕ ಈಗ ಇರುವ ನಿಯಮಗಳೇ ಮುಂದುವರಿಯಲಿದೆ ಎಂದು ಸಚಿವರುಗಳಾದ ಡಾ.ಸುಧಾಕರ್ ಹಾಗೂ ಆರ್. ಅಶೋಕ್ ತಿಳಿಸಿದರು.
ಸೋಮವಾರ ಸಂಜೆ ಮುಖ್ಯ ಮಂತ್ರಿಗಳೊಂದಿಗೆ ನಡೆದ ವರ್ಚುವಲ್ ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ನಿಯಂತ್ರಣಕ್ಕೆ ಎಲ್ಲಾ ರೀತಿಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹೆಚ್ಚು ನಿಗಾ ಇಡಬೇಕು ಗ್ರಾಮಾಂತರ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಜಾಗೃತಿ ಮೂಡಿಸಬೇಕೆಂದು ಸೂಚಿಸಿದ್ದಾರೆ ಎಂದು ತಿಳಿಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್ ಡೌನ್ ಹೇರುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಕರ್ನಾಟಕ ಲಸಿಕೆ ನೀಡುವಲ್ಲಿ ದೇಶದಲ್ಲೇ ಮಂಚೂಣಿಯಲ್ಲಿದೆ ಇದು ಮುಖ್ಯಮಂತ್ರಿಗಳಿಗೆ ಸಮಾಧಾನ ತಂದಿದೆ ಎಂದು ಹೇಳಿದರು.
ಶುಕ್ರವಾರದವರೆಗೆ ಈಗಿರುವ ನಿಯಮಗಳೇ ಮುಂದುವರೆಯಲಿದ್ದು ಶುಕ್ರವಾರ ಮುಖ್ಯಮಂತ್ರಿಗಳು ತಜ್ಞರು ಸಚಿವರುಗಳೊಂದಿಗೆ ಮತ್ತೊಮ್ಮೆ ಸಭೆ ನಡೆಸಲಿದ್ದಾರೆ ಆನಂತರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ವೀಕೆಂಡ್ ಕರ್ಫ್ಯೂ ತೆಗೆಯಬೇಕೆಂದು ಹೋಟೆಲ್ ಮಾಲೀಕರ ಸಂಘದವರು ಕೋರಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಅಶೋಕ್ ಗರಂ ಆದರು.
ಯಾರನ್ನು ಹೇಳಿಕೇಳಿ ರಾಜ್ಯದಲ್ಲಿ ನಿಯಮಗಳನ್ನು ಮಾಡಲು ಸಾಧ್ಯವಿಲ್ಲ ಈಗಿರುವ ನಿಯಮಗಳೇ ಮುಂದುವರಿಯಲಿದೆ, ಶುಕ್ರವಾರದ ಸಭೆಯ ನಂತರ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.