ಬೆಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಪರಿಶೀಲನೆ

ಬೆಂಗಳೂರು: ಸತತ ಮಳೆಯಿಂದ ಸಾಕಷ್ಟು ಬೆಳೆ ನಾಶವಾಗಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹಾನಿಗೆ ಒಳಗಾಗದ ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ ರೈತರಿಂದ ಮಾಹಿತಿ ಪಡೆದರು.

ಈ ವೇಳೆ ಬೆಳೆ ಹಾನಿಯ ಬಗ್ಗೆ ಸರ್ಕಾರ ಸಮೀಕ್ಷೆ ನಡೆಸದೆ ಇರುವುದನ್ನು ಅರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಗ್ರಾಮದಲ್ಲಿ ಮಳೆ ಹಾನಿ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿದಾಗ ರೈತರು ಸಂಕಷ್ಟ ತೋಡಿಕೊಂಡರು. ತಮಗಾದ ನಷ್ಟದ ಬಗ್ಗೆ ವಿವರಣೆ ನೀಡಿದರು.

ಕೋಲ್ಕತ್ತದಿಂದ ಹೂವಿನ ಗಿಡಗಳನ್ನು ವಿಮಾನದ ಮೂಲಕ ತಂದು ನಾಟಿ ಮಾಡಿ ಬೆಳೆಸಲಾಗಿತ್ತು, ಲಕ್ಷಾಂತರ ರೂ. ಖರ್ಚು ಮಾಡಿದ್ದೇವೆ. ಹೂವನ್ನು ವಿದೇಶಗಳಿಗೆ ರಫ್ತು ಮಾಡುತ್ತೇವೆ ಆದರೆ ಈ ಬಾರಿ ಮಳೆಯಿಂದಾಗಿ ಹೂವಿನ ಬೆಳೆ ಕೊಳೆತು ಹೋಗಿದೆ. ಸಂಪೂರ್ಣ ನಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.

ಬೆಳೆ ನಷ್ಟದ ಬಗ್ಗೆ ಅಧ್ಯಯನ ನಡೆಸಲಾಗಿದೆಯೇ ಎಂದು ಸಿದ್ದರಾಮಯ್ಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆದರೆ ರೈತರು ಸರ್ಕಾರದಿಂದ ಯಾವುದೇ ಸಮೀಕ್ಷೆಯಾಗಿಲ್ಲ ಎಂದು ಬೇಸರಪಟ್ಟರು.

ಹೀಗೆ ಅಧಿಕಾರಿ ಒಂದು ತರ ರೈತರು ಇನ್ನೊಂದು ತರ ಗೊಂದಲಕಾರಿಯಾಗಿ ಹೇಳಿದ್ದರಿಂದ ಸಿದ್ದರಾಮಯ್ಯಸಿಡಿಮಿಡಿಗೊಂಡರು.

ಕೂಡಲೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು ಸರಿಯಾಗಿ ವಿವರ ನೀಡುವಂತೆ ಸೂಚಿಸಿದರು.

ಬಳಿಕ ಅವರು ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಬೆಳೆ ನಷ್ಟದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದರು.